ಬ್ರಹ್ಮ ಕಲಶೋತ್ಸವದ ಸಿದ್ಧತೆಯಲ್ಲಿ 'ನಾಡೂರು' ಮೂಡುಬಿದಿರೆ ಲಾಡಿ ಸಪರಿವಾರ ಶ್ರೀ ಚತುರ್ಮುಖ ನಾಗ ಬ್ರಹ್ಮ ದೇವಸ್ಥಾನ

ಜಾಹೀರಾತು/Advertisment
ಜಾಹೀರಾತು/Advertisment

 ಬ್ರಹ್ಮ ಕಲಶೋತ್ಸವದ ಸಿದ್ಧತೆಯಲ್ಲಿ 'ನಾಡೂರು'

ಮೂಡುಬಿದಿರೆ ಲಾಡಿ ಸಪರಿವಾರ ಶ್ರೀ  ಚತುರ್ಮುಖ ನಾಗ ಬ್ರಹ್ಮ ದೇವಸ್ಥಾನ


ಮೂಡುಬಿದಿರೆ: ದೇಶದ ಅಪರೂಪದ ಬ್ರಹ್ಮ ದೇವರ ಸಾನಿಧ್ಯ ಎನ್ನಲಾಗುವ ಹದಿಮೂರು ಶತಮಾನಗಳಿಗೂ ಮಿಕ್ಕಿದ ವೈಭವದ ಪರಂಪರೆ,  ಇತಿಹಾಸವಿರುವ ಮೂಡುಬಿದಿರೆಯ ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ, ಕಾರಣಿಕ ನಾಗ ಬ್ರಹ್ಮರ ಸನ್ನಿಧಿ, ತುಳುನಾಡಿನ ಬ್ರಹ್ಮ ಬಲಾಂಡಿ ದೈವದ  ಮೂಲದ ನಾಡುವಿನ ಮಾಯಸ್ಥಾನ ಇದೀಗ ಸಮಗ್ರ ಜೀರ್ಣೋದ್ಧಾರದೊಂದಿಗೆ  ನವನಿರ್ಮಾಣವಾಗುವ ಮೂಲಕ ಬ್ರಹ್ಮ ಕಲಶೋತ್ಸವಕ್ಕೆ ಭರದಿಂದ ಸಜ್ಜುಗೊಳ್ಳುತ್ತಿದೆ. ಸಂಪೂರ್ಣ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ, ಪರಿವಾರ ದೇವರು, ನಾಗ ಬನದ ಜೀರ್ಣೋದ್ಧಾರ, ಗಣಪತಿ, ನಾಡು, ದೈವದ ಗುಡಿಗಳ ಸಹಿತ ಕೆರೆ, ಬಾವಿ, ಗೋಪುರ, ಆವರಣ ಹೀಗೆ ಒಟ್ಟು ೫ ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳು  ಭಜಕರು ಮತ್ತು ದಾನಿಗಳ ನೆರವಿನಿಂದ ನಡೆದಿವೆ.



ಮೂಡುಬಿದಿರೆ ಪೇಟೆ ಪ್ರಾಂತ್ಯ ಗ್ರಾಮದಲ್ಲಿನ ಲಾಡಿಯ ಪುರಾತನ ನಾಗ ಸಾನಿಧ್ಯ, ಅಪರೂಪ ಎನ್ನಲಾಗುವ ಚತುರ್ಮುಖ ಬ್ರಹ್ಮ ದೇವಸ್ಥಾನ, ದೈವ ಬಲಾಂಡಿಯ ಮೂಲ ನಾಡು ಮಾಯವಾದ ಸ್ಥಾನ ಎಂಬ ಕಾರಣಕ್ಕೆ ನಾಡೂರು ಎಂದು ಹೆಸರಾಗಿರುವ ಈ ಧಾರ್ಮಿಕ ಪರಿಸರಕ್ಕೆ ೧೩೦೦ ವರ್ಷಗಳ ಇತಿಹಾಸವಿದೆ. ಧನ್ವಂತರಿ ಸ್ವರೂಪದ ಬ್ರಹ್ಮ ಮೂರ್ತಿಯ ಕಾರಣಿಕದಿಂದಾಗಿ ವಿವಾಹ ಭಾಗ್ಯ, ಸಂತಾನ ಭಾಗ್ಯ ಮಾತ್ರವಲ್ಲ ಚರ್ಮರೋಗದಿಂದ ಮುಕ್ತರಾಗಿ ಆರೋಗ್ಯ ಭಾಗ್ಯಕ್ಕೆ ಈ ಸನ್ನಿಧಿ ಹೆಸರಾಗಿದೆ.

ಪೌರಾಣಿಕ ಕ್ಷೇತ್ರ:

ದೇಶದಲ್ಲೇ ಅಪರೂಪ ಎನ್ನಲಾಗುವ ಚತುರ್ಮುಖ ಬ್ರಹ್ಮನ ದೇವಸ್ಥಾನ, ಪುರಾತನ ನಾಗ ಬ್ರಹ್ಮ ಬನ,  ದೈವ ಬ್ರಹ್ಮ ಬಲಾಂಡಿಯ ಉಗಮ ಸ್ಥಾನ. ಈ ಪವಿತ್ರ ತಾಣದ  ಪೂರ್ವ ಭಾಗದ ಅಂಗಜಾಲ ಬರ್ಕೆಯಲ್ಲಿ  ಉಗಮ ಸ್ಥಾನ ಹೊಂದಿರುವ ಶಾಂಭವಿ ನದಿ ಈ ದೇವಸ್ಥಾನದ ಹತ್ತಿರವೇ ಹರಿಯುತ್ತಿದ್ದು  ಚರ್ಮ ರೋಗಾದಿ ವ್ಯಾಧಿಗಳ ನಿವಾರಣೆಯ ಖ್ಯಾತಿ ಈ ಲಾಡಿ ದೇವಸ್ಥಾನದ ಪರಿಸರದ ವಿಶೇಷ.


ಪರಮ ಆಸ್ತಿಕರಾದರೂ ಮಕ್ಕಳಿಲ್ಲದ ಮಂಗಳೂರಿನ ಅರಸರ ಮಂತ್ರಿ  ಸತ್ಯ ಬನ್ನಾಯ ಲಕ್ಷ್ಮೀ ದಂಪತಿ ಲಾಡಿ ನಾಗ ಬ್ರಹ್ಮ ದೇವರಿಗೆ ಹೊತ್ತ ಹರಕೆಯ ಫಲವಾಗಿ ಜನಿಸಿದ ನಾಡು  ಸದರ್ನಾಡು ಎಂದು ಖ್ಯಾತನಾಗುತ್ತಾನೆ. ವಿರೋಧಿಗಳ ಪಿತೂರಿಗೆ ಬಲಿಯಾದ ತಂದೆ,  ವಿಷಯ ತಿಳಿದು ಕೆರೆಗೆ ಹಾರಿ ಪ್ರಾಣ ತ್ಯಜಿಸಿದ ತಾಯಿಯ ದುರಂತ ಅಂತ್ಯದಿಂದ ನಾಡು ನಾಸ್ತಿಕನಾಗುತ್ತಾನೆ. ಮುಂದೆ ದೇವ ಬನ್ನಾಯ ಎಂಬ ಅರಸರ ಬಂಟನಾದ ಸದರ್ನಾಡು ಇದೇ ಲಾಡಿ ಕ್ಷೇತ್ರ ದಾಟಿ ಹೋಗುವ ಸಂದರ್ಭದಲ್ಲಿ ಅರಸ ಕೈಮುಗಿದು ಬಂದರೂ ಕುದುರೆ ಇಳಿಯದೇ ಹೋದಾಗ ದೇವರು ಆತನನ್ನು ಕುದುರೆಯೊಂದಿಗೆ ಶಿಲೆ ಮಾಡಿದ ಸ್ಥಳ ಇಂದಿಗೂ ಕುದುರೆ ಗುಂಡಿಯಾಗಿ ಪ್ರಸಿದ್ಧ.


ಮೂಡುಬಿದಿರೆಯ ಮಾರ್ಪಾಡಿ, ಪ್ರಾಂತ್ಯ, ಹೊಸಬೆಟ್ಟು, ಮಾರೂರು, ಬೆಳುವಾಯಿ, ಗ್ರಾಮಸ್ಥರಿಗೆ ಈ ದೇವಸ್ಥಾನವೇ ಮೂಲ. ೧೯೬೪ ರಲ್ಲಿ ಕಲ್ಲು ಹಂಚಿನ ನಿರ್ಮಾಣ ಅಭಿವೃದ್ಧಿ ಕಂಡಿದ್ದ ದೇವಳ ಕಳೆದ ೨೦೨೨ರ ಆಗಸ್ಟ್ ನಲ್ಲಿ ಅಷ್ಟಮಂಗಲ ಪ್ರಶ್ನೆಯ ಬಳಿಕ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಗಿತ್ತು. ಅತ್ಯಂತ ಪ್ರಾಚೀನ ಎನ್ನಲಾಗುವ ಅಪರೂಪದ ನಾಗ ಶಿಲಾ ಮೂರ್ತಿಗಳಿರುವ ನಾಗ ಬನ ಇಲ್ಲಿನ ವಿಶೇಷ. ದೇವಳದ ನವೀಕರಣ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ  ನಾಗ ಸನ್ನಿಧಿಯ ಸ್ಥಳವೂ ದಾನಿಗಳಿಂದ ದೊರೆತಲ್ಲಿ ಅಭಿವೃಧ್ಧಿಪಡಿಸುವ ನೀಲ ನಕಾಶೆ ಸಿದ್ಧವಾಗಿದೆ.


ಸಮಗ್ರ ಜೀರ್ಣೋದ್ಧಾರ: ಶಾಸಕ ಉಮಾನಾಥ ಕೋಟ್ಯಾನ್ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ, ಅನಂತ ಕೃಷ್ಣ ರಾವ್ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿಯ ಸಕ್ರಿಯ ಕಾರ್ಯ ಯೋಜನೆಯಿಂದ ದೇವಳದ ಸಮಗ್ರ ನವೀಕರಣ, ಅಭಿವೃಧ್ಧಿ ಕಾರ್ಯಗಳು ಭರದಿಂದ ಸಾಗಿವೆ. ಸಮಿತಿಗಳು ದೇವಳಕ್ಕೆ ಸಂಬಂಧಿಸಿದ ಗ್ರಾಮಸ್ಥರ ಉದಾರ ಕೊಡುಗೆಗಳ ನಿರೀಕ್ಷೆಯಲ್ಲಿವೆ. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ನೇತೃತ್ವದಲ್ಲಿ  ಪದ್ಮನಾಭ ಶಿಲ್ಪಿ ಬಳಗವು ಇಲ್ಲಿನ ಒಟ್ಟು ೫ ಸಾವಿರ ಅಡಿ ವಿಸ್ತಾರದಲ್ಲಿನ ಸಂಪೂರ್ಣ ಶಿಲಾಮಯ ಛಾವಣಿಯ ವಿಶಿಷ್ಠ ಗುಡಿ ಗೋಪುರಗಳನ್ನು ರೂಪಿಸುವಲ್ಲಿ ತೊಡಗಿಕೊಂಡಿದೆ.

೨೦೨೫ ರ ಫೆ. ೧೨ ರಿಂದ ಬ್ರಹ್ಮಕಲಶ ಸಂಭ್ರಮ!

ದೇವಳದ ಸಮಗ್ರ ನವೀಕರಣ, ಜೀರ್ಣೋದ್ಧಾರ ಕಾರ್ಯ ಈಗಾಗಲೇ ಭರದಿಂದ ಸಾಗಿದ್ದು ದಾನಿಗಳ ಉದಾರ ಕೊಡುಗೆ, ಭಜಕರ ಸಹಕಾರದಿಂದ ಈ ಕಾರಣಿಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ವೇಗ ಸಿಗುವ ನಿರೀಕ್ಷೆಯಿದೆ. ಇದೀಗ ಶನಿವಾರ ಷಷ್ಠಿ ಮಹೋತ್ಸವದ ಸುದಿನ ದೇವಳದ ಬ್ರಹ್ಮ ಕಲಶೋತ್ಸವ ಸಂಭ್ರಮ ಮುಂದಿನ ವರ್ಷ (೨೦೨೫) ಫೆ ೧೨ರಿಂದ ೧೬ರವರೆಗೆ ನಡೆಯಲಿರುವ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ.

ವೇದಮೂರ್ತಿ ಶ್ರೀ ಮುರಳಿದರ ತಂತ್ರಿ ಎಡಪದವು ,

 ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ  ಶಾಸಕ ಉಮಾನಾಥ ಕೋಟ್ಯಾನ್ ,  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅನಂತ ಕೃಷ್ಣ ರಾವ್,  ಸಹಿತ ಪದಾಧಿಕಾರಿಗಳು,

ಪುರಸಭಾ ಸದಸ್ಯ ಎಚ್ ಸುರೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments