*ವಿದ್ಯಾರ್ಥಿಗಳು ರತನ್ ಟಾಟಾ ಗೈದ ಸೇವೆಯನ್ನು ಆದರ್ಶವಾಗಿ ಸ್ವೀಕರಿಸಿ ಅವರಂತೆ ಬೆಳೆಯಲು ಕನಸನ್ನು ಕಂಡು ಪ್ರಯತ್ನಿಸಬೇಕು - ಶ್ರೀ ಕೆ ಹೇಮರಾಜ್.*
ಮೂಡುಬಿದಿರೆ, ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘ(ರಿ) ಇದರ ಆಡಳಿತಕ್ಕೆ ಒಳಪಟ್ಟ ಜೈನ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 21-10-2024 ನೇ ಸೋಮವಾರದಂದು ಇತ್ತೀಚೆಗೆ ಅಗಲಿದ ಯಶಸ್ವಿ ಹಿರಿಯ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಿ.ಜೆ.ವಿ.ಸಂಘ(ರಿ) ಹಾಗೂ ಕಾಲೇಜಿನ ಗೌರವಾನ್ವಿತ ಸಂಚಾಲಕರಾದ ಶ್ರೀ ಕೆ ಹೇಮರಾಜ್ ಇವರು ಜ್ಯೋತಿಯನ್ನು ಬೆಳಗಿಸುವ ಮೂಲಕ ರತನ್ ಟಾಟಾ ಅವರಿಗೆ ಗೌರವವನ್ನು ಸಮರ್ಪಿಸಿದರು. ನಂತರ ಮಾತನಾಡುತ್ತಾ " ದೇಶ ಕಂಡ ಅಪರೂಪದ,ಅಗ್ರಗಣ್ಯ ವಾಣಿಜ್ಯೋದ್ಯಮಿ ಹಾಗೂ ಮಾನವತಾವಾದಿಗಳಲ್ಲಿ ರತನ್ ಟಾಟಾ ಒಬ್ಬರಾಗಿದ್ದಾರೆ. ನನ್ನ ಬದುಕು ಎಂದಿಗೂ ಭಾರತದ ಅಭಿವೃದ್ಧಿಗಾಗಿ ಮುಡಿಪು ಎಂದು ಹೇಳುತ್ತಾ ತಮ್ಮ ಲಾಭದ ಅರುವತ್ತು ಶೇಕಡಾ ಸಂಪತ್ತನ್ನು ಚಾರಿಟೇಬಲ್ ಟ್ರಸ್ಟ್ ಗಳಿಗಾಗಿ ಖರ್ಚು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೇವಾ ಮನೋಭಾವವನ್ನು ಮೆರೆದವರು ಇವರಾಗಿದ್ದಾರೆ. ಆದುದರಿಂದ ವಿದ್ಯಾರ್ಥಿಗಳೆಲ್ಲರೂ ರತನ್ ಟಾಟಾ ಅವರ ಸರಳ ಜೀವನ, ಸಾಧನೆ ಹಾಗೂ ಗೈದ ಸೇವೆಯನ್ನು ತಮ್ಮ ಜೇವನದಲ್ಲಿ ಅಳವಡಿಸಿಕೊಂಡು, ಅವರನ್ನು ಮಾದರಿಯಾಗಿ ಇಟ್ಟುಕೊಂಡು ಅವರಂತೆ ಆಗಲು ಕನಸನ್ನು ಕಂಡು ಅದಕ್ಕಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ
ಡಾI ಪ್ರಭಾತ್ ಬಲ್ನಾಡು ಇವರು ರತನ್ ಟಾಟಾ ಇವರ ಸಾಧನೆಯನ್ನು ವಿವರಿಸುತ್ತಾ ಸುಮಾರು 150 ದೇಶಗಳಲ್ಲಿ ತಮ್ಮ ಕಂಪೆನಿಯನ್ನು ಸ್ಥಾಪಿಸಿ, ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತರಾಗಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳಾದ ನೀವೂ ಕೂಡ ಇನ್ನೊಬ್ಬರಿಗೆ ಉದ್ಯೋಗ ನೀಡುವ ಮಟ್ಟದಲ್ಲಿ ಬೆಳೆಯಬೇಕು. ರತನ್ ಟಾಟಾ ಅವರು ತಮ್ಮ ಆದಾಯದ ನೂರಕ್ಕೆ ನೂರು ಶೇಕಡಾ ತೆರಿಗೆ ಕಟ್ಟುವ ಮೂಲಕ ಬಹಳ ಶುಭ್ರ ಹಾಗೂ ಪ್ರಾಮಾಣಿಕವಾಗಿ ಧ್ರುವ ನಕ್ಷತ್ರದಂತೆ ಬೆಳಗಿದ್ದಾರೆ ಹಾಗೂ ಭಾರತದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ ಎಂದು ಹೇಳುತ್ತಾ ನುಡಿ ನಮನವನ್ನು ಸಮರ್ಪಿಸಿದರು.
ನಂತರ ಸಭೆಯಲ್ಲಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಡಿ.ಜೆ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಶಿಕಾಂತ್ ವೈ, ಡಿ.ಜೆ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ವೀಣಾ, ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರಾದ ಶ್ರೀ ಮಧುಕರ್ ಸಾಲಿನ್ಸ್, ಸಹ ಸಂಸ್ಥೆಗಳ ಉಪನ್ಯಾಸಕರು, ಕಾಲೇಜಿನ ಉಪನ್ಯಾಸಕರು - ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿ ನಾಯಕರು
ಶ್ರೀ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು ಹಾಗೂ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಮಹಾವೀರ್ ಎಂ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
0 Comments