ಸೆ.೨೯ : ವಿಶ್ವ ಹೃದಯ ದಿನ
*ಮೂಡುಬಿದಿರೆಯಲ್ಲಿ ಹೃದ್ರೋಗ ಜಾಗೃತಿಗಾಗಿ ನಡಿಗೆ
ಮೂಡುಬಿದಿರೆ : ವಿಶ್ವ ಹೃದಯ ದಿನದ ಅಂಗವಾಗಿ ಮೂಡುಬಿದಿರೆಯ ಡಾಕ್ಟರ್ ಅಸೊಸಿಯೇಶನ್, ಎಜೆ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಅಫ್ ಮೂಡುಬಿದಿರೆ ಟೆಂಪಲ್‌ಟೌನ್ ಸಹಯೋಗದಲ್ಲಿ ಸೆ.29ರಂದು ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಹೃದ್ರೋಗದ ಬಗ್ಗೆ ಜಾಗೃತಿಗಾಗಿ ನಡಿಗೆ (ವಾಕ್‌ಥಾನ್) ಬೆಳಿಗ್ಗೆ ೮.೧೫ಕ್ಕೆ ಜರಗಲಿದೆ ಎಂದು ಡಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಡಾ. ಮಹಾವೀರ ಜೈನ್ ಅವರು ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ವಿವರ ನೀಡಿದ ಅವರು ರೋಟರಿ ಶಾಲೆಯಿಂದ ಕನ್ನಡ ಭವನದವರೆಗೆ ನಡೆಯುವ ಈ ಜಾಥಾವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಬಳಿಕ ಕನ್ನಡಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ.
ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖಸ್ಥ ಡಾ. ಬಿ ಮಂಜುನಾಥ ಹೃದ್ರೋಗದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಜಾಥಾದಲ್ಲಿ ರೋಟರಿ ಕ್ಲಬ್, ರೋಟರಿ ಮಿಡ್‌ಟೌನ್, ಆಳ್ವಾಸ್ ನರ್ಸಿಂಗ್ ಕಾಲೇಜು, ಲಯನ್ಸ್ ಕ್ಲಬ್, ಜೇಸಿಸ್, ರೋಟರ್‍ಯಾಕ್ಟ್, ಲಿಯೋ ಕ್ಲಬ್‌ಗಳ ೩೦೦ಕ್ಕೂ ಅಧಿಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ವ್ಯಕ್ತಿಗೆ ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಹೇಗೆ ಸ್ಪಂದಿಸಬಹುದು ಎಂಬ ಬಗ್ಗೆ ಪೋಲಿಸ್ ಮತ್ತು ಗೃಹರಕ್ಷಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.
ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್ ಮಾತನಾಡಿ ಈಗಿನ ಕಾಲ ಘಟ್ಟದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಸಣ್ಣ ಸಣ್ಣ ವಯಸ್ಸಿನವರಿಗೆ ಹೃದಯಾಘಾತವಾಗುವುದನ್ನು ನಾವು ಕಾಣುತ್ತಿದ್ದೇವೆ ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ವಿಶ್ವ ಹೃದಯ ದಿನದಂದು ಜಾಗೃತಿ ಮೂಡಿಸಲು ಹೊರಟಿದ್ದೇವೆ ಎಂದು ತಿಳಿಸಿದರು.
ಆಳ್ವಾಸ್ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಸದಾನಂದ ನಾಯಕ್ ಅವರು ಮಾತನಾಡಿ ಹೃದ್ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ರೋಟರಿ ಟೆಂಪಲ್‌ಟೌನ್ ಕಾರ್ಯದರ್ಶಿ ಹರೀಶ್ ಎಂ.ಕೆ ಉಪಸ್ಥಿತರಿದ್ದರು.
0 Comments