ಎಕ್ಕಮಾಲೆ ಎಣ್ಣೆ ಮಾರಾಟಕ್ಕಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹೈಕೋರ್ಟ್
ಮೂಡುಬಿದಿರೆ: ಸಂಜೀವಿನಿ ಆಯುರ್ವೇದಿಕ್ ನ ವೈದ್ಯ| ಎಂ.ಕೆ.ಗರ್ಡಾಡಿ ಅವರು ಉತ್ಪಾದನೆ ಮತ್ತು ಮಾರಾಟ ಮಾಡುತ್ತಿದ್ದ 'ಎಕ್ಕಮಾಲೆ ಎಣ್ಣೆ' ಗೆ ಉಡುಪಿ ಜಿಲ್ಲಾ ನ್ಯಾಯಾಲಯವು ನೀಡಿದ್ದ ತಡೆಯಾಜ್ಞೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ತೆರವುಗೊಳಿಸಿ ಆದೇಶಿಸಿದೆ.
ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಸುಧಾಕರ ಎಂ.ಪೂಜಾರಿಯವರು ಉತ್ಪಾದಿಸುತ್ತಿದ್ದ 'ಎಕ್ಕದ ಎಣ್ಣೆ' ಎಂಬ ಟ್ರೇಡ್ ಮಾರ್ಕನ್ನು ಉಲ್ಲಂಘಿಸಿ ಎಂ.ಕೆ.ಗರ್ಡಾಡಿ ಅವರು 'ಎಕ್ಕಮಾಲೆ ಎಣ್ಣೆ' ಉತ್ಪಾದಿಸುತ್ತಿದ್ದಾರೆ,ಆ ಉತ್ಪಾದನೆ ಮತ್ತು ಮಾರಾಟಕ್ಕೆ ತಡೆಯಾಜ್ಞೆಯನ್ನು ನೀಡಬೇಕೆಂದು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.ಅದರಂತೆ ಉಡುಪಿ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
ಉಡುಪಿ ಜಿಲ್ಲಾ ನ್ಯಾಯಾಲಯದ ತಡೆಯಾಜ್ಞೆ ವಿರುದ್ಧ ಎಂ.ಕೆ.ಗರ್ಡಾಡಿ ಅವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಹೈಕೋರ್ಟ್ ,ಉಡುಪಿ ಜಿಲ್ಲಾ ನ್ಯಾಯಾಲಯವು ನೀಡಿದ್ದ ತಡೆಯಜ್ಞೆ ಆದೇಶವನ್ನು ತೆರವುಗೊಳಿಸಿದ್ದು ಈ ಪ್ರಕರಣದಲ್ಲಿ ಎಂ.ಕೆ.ಗರ್ಡಾಡಿ ಅವರಿಗೆ ಜಯ ಸಿಕ್ಕಂತಾಗಿದೆ.
ಗರ್ಡಾಡಿ ಅವರ ಪರವಾಗಿ ನ್ಯಾಯವಾದಿ ಮುಹಮ್ಮದ್ ಸುಲ್ತಾನ್ ಬ್ಯಾರಿ ಅವರು ವಾದಿಸಿದ್ದರು.
ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ಸಂಜೀವಿನಿ ಆಯುರ್ವೇದಿಕ್ ಮೂಲಕ ಜನಪ್ರಿಯರಾಗಿರುವ ಎಂ.ಕೆ.ಗರ್ಡಾಡಿ ಅವರ 'ಎಕ್ಕಮಾಲೆ ಎಣ್ಣೆ' ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಸಂಬಂಧಪಟ್ಟ ಇಲಾಖೆಗಳಿಂದ ಬೇಕಾದ ದಾಖಲೆಗಳನ್ನೆಲ್ಲಾ ಪಡೆದುಕೊಂಡು ಕಾನೂನುಬದ್ಧವಾಗಿಯೇ ಅವರು ಈ ಎಣ್ಣೆಯನ್ನು ಉತ್ಪಾದಿಸಿ ಮಾರುಕಟ್ಟೆ ಮಾಡುತ್ತಿದ್ದರು.
0 Comments