ಐವನ್ ಡಿ"ಸೋಜಾರಿಂದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ: ಮೂಡುಬಿದಿರೆ ಬಿಜೆಪಿಯಿಂದ ಪ್ರತಿಭಟನೆ, ರಸ್ತೆತಡೆ
ಮೂಡುಬಿದಿರೆ: ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಬಾಂಗ್ಲಾದೇಶ ಮಾದರಿಯಲ್ಲಿ ದಂಗೆ ಏಳಲು ಪ್ರಚೋಧಿಸುತ್ತಿರುವ ಐವನ್ ಡಿಸೋಜ ವಿರುದ್ಧ ಮತ್ತು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲು ವಿಳಂಬ ಮಾಡುತ್ತಿರುವ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮೂಲ್ಕಿ-ಮೂಡುಬಿದಿರೆ ಮಂಡಲ ಇದರ ವತಿಯಿಂದ ಬುಧವಾರ ಮೂಡುಬಿದಿರೆಯಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನು ಖುಷಿ ಪಡಿಸುವ ಉದ್ದೇಶದಿಂದ ನಮ್ಮ ರಾಜ್ಯಪಾಲರನ್ನು ಬಾಂಗ್ಲಾದ ಪ್ರಧಾನಿಯನ್ನು ಓಡಿಸಿದಂತೆ ಓಡಿಸಬೇಕೆಂದು ಬೇಜಾವಾಬ್ದಾರಿ ಹೇಳಿಕೆ ನೀಡಿರುವ ಎಂಎಲ್ ಸಿ ಐವನ್ ಡಿ"ಸೋಜಾ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸರಕಾರವು ಸಿದ್ಧರಾಮಯ್ಯ ಅವರ ಶ್ರೀಮತಿ ಅವರ ಹೆಸರಿನಲ್ಲಿ ಮೈಸೂರಲ್ಲಿ 14 ಸೈಟ್ ಗಳನ್ನು ಅಕ್ರಮವಾಗಿ ಖರೀದಿಸಿದ್ದು ಅಲ್ಲದೆ ವಾಲ್ಮೀಕಿ ನಿಗಮದ 197 ಕೋಟಿ ಹಗರಣದ ಬಗ್ಗೆ ಪ್ರಾಸಿಕ್ಯೂಷನ್ ಗೆ ಆದೇಶ ನೀಡಿರುವ ರಾಜ್ಯಪಾಲರಿಗೆ ಬೆದರಿಕೆ ಹಾಕಿರುವ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಅವರು ಐವನ್ ಡಿ"ಸೋಜ ಅವರನ್ನು ಮೂಡುಬಿದಿರೆಯ ಪೊಲೀಸರಾದರೂ ಬಂಧಿಸಿ ನಿಮ್ಮ ಕರ್ತವ್ಯ ನಿಷ್ಠೆಯನ್ನು ತೋರಿಸಿ ಎಂದರು.
ಮಂಡಲಾಧ್ಯಕ್ಷ ದಿನೇಶ್, ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ಕುಮಾರ್, ತೆಂಕಮಿಜಾರು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ, ಶಿರ್ತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ, ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಲಕ್ಷ್ಮಣ್ ಪೂಜಾರಿ, ಸೋಮನಾಥ ಕೋಟ್ಯಾನ್, ಅಶ್ವತ್ಥ್ ಪಣಪಿಲ, ಅಭಿಲಾಷ್ ಕಟೀಲ್, ಹಿಂ.ಜಾ.ವೇದಿಕೆಯ ಸಮಿತ್ ರಾಜ್ ದರಗುಡ್ಡೆ, ವಿಹಿಂಪ, ಬಜರಂಗದಳದ ಅಭಿಲಾಷ್ ಅರ್ಜುನಾಪುರ, ಗುರುಪ್ರಸಾದ್ ಭಟ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಳುವಾಯಿ ಗ್ರಾ.ಪಂ.ಸದಸ್ಯ ಭರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
0 Comments