ಸಂಸದ ಕೋಟಗೆ ಉನ್ನತ ಸ್ಥಾನ ನೀಡಿದ ಹೈಕಮಾಂಡ್-ಕರ್ನಾಟಕದ ಬಿಜೆಪಿ ಸಂಸದರಿಗಿನ್ನು ಕೋಟ ಲೀಡರ್
ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿ ಸಂಸತ್ತಿಗೆ 16 ಮುಖ್ಯ ಸಚೇತಕರನ್ನು ಘೋಷಿಸಿದ್ದು ಕರ್ನಾಟಕ ರಾಜ್ಯಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭಾರತೀಯ ಜನತಾ ಪಾರ್ಟಿಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿರುವ ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯದರ್ಶಿ ಡಾ.ಶಿವ ಶಕ್ತಿ ನಾಥ್ ಬಾಕ್ಸಿ ಅವರು ಒಟ್ಟು 16 ಸಂಸದರನ್ನು ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕರ್ನಾಟಕದಿಂದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಣೆ ಹಾಕಿದ್ದು ಪ್ರಾಮಾಣಿಕತೆ ಮತ್ತು ಹಿರಿತನಕ್ಕೆ ಬಿಜೆಪಿ ನೀಡಿದ ಗೌರವವಾಗಿದೆ ಎಂದು ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸಂಸದ ಕೋಟ ಈ ಜವಾಬ್ದಾರಿ ನೀಡಿರುವುದಕ್ಕೆ ಪಕ್ಷದ ವರಿಷ್ಠರಿಗೆ ಧನ್ಯವಾದಗಳು ಸಲ್ಲಿಸಿದರು.
ಈ ಹಿಂದೆ ನಾಲ್ಕು ಬಾರಿ ವಿಧಾನ ಪರಿಷತ್ ಶಾಸಕರಾಗಿ, ನಾಲ್ಕು ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಆಡಳಿತ ನಡೆಸಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ನಾಯಕರೆನಿಸಿಕೊಂಡ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬಿಜೆಪಿ ಈ ಬಾರಿ ಮುಖ್ಯ ಸಚೇತಕ ಹುದ್ದೆಗೆ ಆಯ್ಕೆ ಮಾಡಿದೆ.
0 Comments