ಚಿಕ್ಕಮಗಳೂರಿನಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಸಂಸದರಿಗೆ ಅರ್ಜಿಗಳ ಮಹಾಪೂರ:ಒಂದೇ ತಿಂಗಳಲ್ಲಿ ಸಮಸ್ಯೆ ಬಗೆಹರಿಸಲು ಕೋಟ ಖಡಕ್ ಸೂಚನೆ
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಶೃಂಗೇರಿ, ಕಳಸ, ಮೂಡಿಗೆರೆ, ಆಲ್ದೂರು, ನರಸಿಂಹರಾಜಪುರ, ಕೊಪ್ಪ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕದ ಕೊರತೆ ಗಂಭೀರ ಪರಿಸ್ಥಿತಿಯನ್ನು ತಲುಪಿದೆ. ರಸ್ತೆ ಅಪಘಾತವು ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಮೊಬೈಲ್ ಸಂಪರ್ಕ ಸಂಪರ್ಕದ ಸಮಸ್ಯೆ ಅದೆಷ್ಟೋ ಜನರ ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.
ಜಿಲ್ಲೆಯಲ್ಲಿ 203 2ಜಿ ಟವರ್ ಗಳು, 285 3ಜಿ ಟವರ್‌ಗಳು ಹಾಗೂ 28 4g ಟವರ್ ಗಳು ಲಭ್ಯವಿದ್ದರೂ ನೆಟ್ವರ್ಕ್ ಇಲ್ಲದ ಪರಿಸ್ಥಿತಿಯಿಂದ ಬಿಎಸ್ಎನ್ಎಲ್ ಗ್ರಾಹಕರು ಪರದಾಡುತ್ತಿದ್ದಾರೆ. ಬಿಎಸ್ಎನ್ಎಲ್ ಅಂದರೆ ವ್ಯಾಪಾರಕ್ಕಿಂತಲೂ ಹೆಚ್ಚಾಗಿ ಸೇವೆ ನೀಡುವ ಒಂದು ಸಂಸ್ಥೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಟವರ್ ಗಳು ಕಾರ್ಯ ಚಟುವಟಿಕೆ ಪ್ರಾರಂಭ ಮಾಡಿ 2g ಇಂದ 4ಜಿ ಗೆ ಉನ್ನತೀಕರಿಸಲು ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಜಿಲ್ಲೆಗೆ ಅಗತ್ಯವಾದ ಉಪಕರಣಗಳ ಕೊರತೆ ಆದರೆ ಪಟ್ಟಿ ಹಿಡಿದುಕೊಂಡು ದೆಹಲಿಗೆ ಬರುವುದು ಅಥವಾ ಲಿಖಿತವಾದ ಬೇಡಿಕೆ ಸಲ್ಲಿಸುವುದು. ಕೇಂದ್ರ ದೂರ ಸಂಪರ್ಕ ಸಚಿವರನ್ನು ಭೇಟಿ ಮಾಡಿ ತಮ್ಮೆಲ್ಲ ಬೇಡಿಕೆಗಳನ್ನು ಪೂರೈಸುವ ಜವಾಬ್ದಾರಿ ನನ್ನದು ಎಂದು ಕೋಟ ಅಧಿಕಾರಿಗಳಿಗೆ ತಿಳಿ ಹೇಳಿದರು. ಇನ್ನು ಮುಂದೆ ವಿದ್ಯುತ್ ಸಂಪರ್ಕದ ಕಡಿತ ಆದಾಗ ಟವರ್ ಗಳ ಕಾರ್ಯನಿರ್ವಹಣೆಗೆ ಬ್ಯಾಟರಿ ಕೊರತೆಯಾಗಲಿ ಅಥವಾ ಜನರೇಟರ್ ನ ಡೀಸೆಲ್ ಸಮಸ್ಯೆಯಾಗಲಿ ಬಾರದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತೀರ ಗ್ರಾಮೀಣ ಪ್ರದೇಶದಲ್ಲಿ ಟವರ್ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಗಳ ಕೊರತೆ ಇದ್ದರೆ ಸ್ಥಳೀಯ ಗ್ರಾಮ ಪಂಚಾಯತ್ ಒಪ್ಪಿದರೆ ಆರ್ಥಿಕ ನೆರವು ನೀಡಿ ನಿರ್ವಹಣೆಗಾಗಿ ಪಂಚಾಯಿತಿಗೆ ಪ್ರಾಯೋಗಿಕವಾಗಿ ಒಪ್ಪಿಸಿ ಎಂದು ಸಲಹೆ ನೀಡಿದರು.
#ಸಂಸದರಿಗೆ ಅರ್ಜಿಗಳ ಮಹಾಪೂರ
ಮೊಬೈಲ್ ಟವರ್ ಗಳ ಬಗ್ಗೆ ಸಭೆ ನಡೆಸುತ್ತಿದ್ದಂತೆಯೇ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಮಸ್ಯೆಗಳನ್ನು ಒಳಗೊಂಡ ಅರ್ಜಿಗಳ ಮಹಾಪೂರವೇ ಹರಿದುಬಂದಿದೆ. ಜನರ ಬೇಡಿಕೆಯಂತೆ ಹೊಸ ಟವರ್ ಗಳ ಪ್ರಸ್ತಾವನೆಯನ್ನು ಸಲ್ಲಿಸಲು ಕೋಟ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸೂಚಿಸಿದರು. ಟವರ್ ಗಳ ಅಳವಡಿಕೆ ಅರಣ್ಯ ಇಲಾಖೆಯ ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆಯ ಸಹಕಾರದ ಬಗ್ಗೆ ಬಿಎಸ್ಎನ್ಎಲ್ ಅಧಿಕಾರಿಗಳು ಪ್ರಸ್ತಾಪಿಸಿದಾಗ ಉಪಸ್ಥಿತರಿದ್ದ ಅರಣ್ಯ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಬೆಸ್ಕಾಂ ಅಧಿಕಾರಿಗಳು ಒಂದೇ ವಾರದಲ್ಲಿ ತಮ್ಮೆಲ್ಲ ಇಲಾಖೆಗೆ ಸಂಬಂಧಪಟ್ಟಂತಹ ಸಮಸ್ಯೆಗಳ ಬಗೆಹರಿಸಿಕೊಳ್ಳುವುದಾಗಿ ಒಪ್ಪಿಕೊಂಡರು. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜ್ ಉಪಸ್ಥಿತರಿದ್ದ ಸಭೆಯಲ್ಲಿ ಇನ್ನೊಂದು ತಿಂಗಳಲ್ಲಿ ಮುಂದಿನ ಪ್ರಗತಿಯ ಸಭೆಯನ್ನು ನಿಗದಿಪಡಿಸಲು ಸೂಚನೆ ನೀಡಿದ ಸಂಸದ ಕೋಟ ಅಷ್ಟರೊಳಗೆ ಪೂರ್ಣ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
0 Comments