ಕಾಂಗ್ರೆಸ್ ಪಕ್ಷದಿಂದ ಐವನ್ ಡಿ"ಸೋಜ, ಹರ್ಷವರ್ಧನ್ ಪಡಿವಾಳ್ ಗೆ ಅಭಿನಂದನೆ
ಮೂಡುಬಿದಿರೆ: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಐವನ್ ಡಿಸೋಜ ಮತ್ತು ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹರ್ಷವರ್ಧನ ಪಡಿವಾಳ್ ಅವರನ್ನು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಮಾಜಮಂದಿರದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಸದೃಢವಾಗುತ್ತಿದೆ. ಜಿಲ್ಲೆಯಲ್ಲಿಯೂ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ನಲ್ಲಿ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರಿಗೆ ಉಜ್ವಲ ಭವಿಷ್ಯವಿದೆ. ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಧಿಕಾರ ಗಳಿಸುವುದು ನಮ್ಮ ಗುರಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸನ್ಮಾನಿತರನ್ನು ಅಭಿನಂಧಿಸಿ ಮಾತನಾಡಿಮೂಡುಬಿದಿರೆ ಮೂಡಾವು ಭ್ರಷ್ಠಾಚಾರ ರಹಿತ, ಬಡಜನರ ಆಶೋತ್ತರಗಳನ್ನು ಈಡೇರಿಸುವ ಕಚೇರಿಯಾಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಉತ್ತಮ ಸ್ಥಾನಮಾನ ಲಭಿಸುತ್ತದೆ ಎಂಬುದಕ್ಕೆ ಸಾಕ್ಷಿ ಐವನ್, ಹರ್ಷವರ್ಧನ್ ಎಂದರು. ಮೂಡಾದ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ಮಾತನಾಡಿ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯರಾದ ವಸಂತ ಬರ್ನಾಡ್, ಚಂದ್ರಹಾಸ ಸನಿಲ್, ಮುಲ್ಕಿ ಕಾಂಗ್ರೆಸ್ ಅಧ್ಯಕ್ಷ ಮೋಹನ ಕೋಟ್ಯಾನ್, ನಗರ ಅಧ್ಯಕ್ಷ ಪುರಂದರ ದೇವಾಡಿಗ, ಮಹಿಳಾ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಜೀರ್, ಎಸ್‌ಸಿ ಘಟಕದ ಅಧ್ಯಕ್ಷ ವಿವೇಕ್, ಎಸ್‌ಟಿ ಘಟಕದ ಅಧ್ಯಕ್ಷ ಜಯಕುಮಾರ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಮೂಡಾದ ಸದಸ್ಯರು ಉಪಸ್ಥಿತರಿದ್ದರು. ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜೊಸ್ಸಿ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಕೋಟ್ಯಾನ್ ವಂದಿಸಿದರು.
0 Comments