400 ಕೆವಿ ವಿದ್ಯುತ್‌ಲೈನ್ ವಿರೋಧಿಸಿ ಜು.30ರಂದು ರೈತರಿಂದ ಪ್ರತಿಭಟನೆ
ಮೂಡುಬಿದಿರೆ : ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 400 ಕೆವಿ ವಿದ್ಯುತ್ ಲೈನ್ ಅಳವಡಿಕೆ ವಿರೋಧಿಸಿ ಕಂಪೆನಿಯವರ ದುರ್ವರ್ತನೆ ಖಂಡಿಸಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್‌ಲೈನ್ ವಿರೋಧಿ ಹೋರಾಟ ಸಮಿತಿಯಿಂದ ಜು.30ರಂದು ಬೆಳಿಗ್ಗೆ 10ಕ್ಕೆ ಮಿಜಾರು ಗೋಪಾಲಕೃಷ್ಣ ದೇವಸ್ಥಾನ ಬಳಿಯ ಬೈತರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು
ಸಮಿತಿಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ತಿಳಿಸಿದ್ದಾರೆ.
ಅವರು ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಈ ಪ್ರತಿಭಟನೆಯಲ್ಲಿ ಮಿಜಾರು, ಇರುವೈಲು, ಕಿಲೆಂಜಾರು, ಕೊಳವೂರು, ಬಂಟ್ವಾಳ, ವಿಟ್ಲ, ಐಕಳ, ಏಳಿಂಜೆ, ಮೂಡುಬಿದಿರೆ ಹಾಗೂ ಉಡುಪಿ ಜಿಲ್ಲೆಯ ಯೋಜನೆಯ ಸಂತ್ರಸ್ತರು ಪಾಲ್ಗೊಳ್ಳಲಿದ್ದಾರೆ.
ಈ ವಿದ್ಯುತ್‌ಲೈನ್ ಅಳವಡಿಕೆಗೆ ರೈತರ ತೀವ್ರ ವಿರೋಧವಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಚಿವರುಗಳು ಹಾಗೂ ಜಿಲ್ಲೆಯ ಶಾಸಕರಿಗೆ ಮನವಿ, ಹಕ್ಕೋತ್ತಾಯ ಮಾಡಿದ್ದರೂ ಕಡೆಗಣಿಸಿದ್ದಾರೆ. ಯೋಜನೆಯ ಗುತ್ತಿಗೆ ಪಡೆದುಕೊಂಡಿರುವ ಸ್ಪೆರ್‌ಲೈಟ್ ಕಂಪನಿಯವರು ಯೋಜನೆಯಿಂದ ಬಾದಿತರಾಗುವ ಜಮೀನು ಮಾಲಕರಿಗೆ ಯಾವುದೇ ಪೂರ್ವ ಮಾಹಿತಿ, ನೋಟೀಸು ನೀಡದೆ ತಹಸೀಲ್ದಾರರ ಉಪಸ್ಥಿತಿಯಲ್ಲಿ ಏಕಾಏಕಿ ಜೆಸಿಬಿ ತಂದು ಗದ್ದೆಗೆ ನುಗ್ಗಿಸಿ ಹೊಂಡ ತೋಡಿ ಕಾನೂನನ್ನು ಗಾಳಿಗೆ ತೂರಿ ದುರ್ವರ್ತನೆ ತೋರುತ್ತಿದ್ದಾರೆ. ರೈತರ ಬೆಳೆಗಳು ಹಾಗೂ ಕೃಷಿ ಭೂಮಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಲ್ಫೋನ್ಸ್ ಡಿಸೋಜ, ದಯಾನಂದ ಶೆಟ್ಟಿ ಕಳವೂರು, ಕೃಷ್ಣ ಪ್ರಸಾದ್ ತಂತ್ರಿ, ಶ್ರೀಧರ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ ಏಳಿಂಜೆಗುತ್ತು ಉಪಸ್ಥಿತರಿದ್ದರು.
0 Comments