ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ 38ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ, ಜು. 16: ಧಾರ್ಮಿಕ ಉತ್ಸವಗಳಲ್ಲಿ ದೇಶೀಯ ಸಾಂಸ್ಕೃತಿಕ ಪರಂಪರೆಯ ಮೂಲಸತ್ವ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಉದ್ಯಮಿ, ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಹೇಳಿದರು.
ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಆ.27ರಂದು ಮೂಡುಬಿದಿರೆ ಶ್ರೀ ಕೃಷ್ಣ ಕಟ್ಟೆ ಎದುರು ನಡೆಯಲಿರುವ 38ನೇ ವರ್ಷದ ಮೊಸರುಕುಡಿಕೆ ಮತ್ತು ಸಾಂಸ್ಕೃತಿಕ ಉತ್ಸವ ಕುರಿತಾದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿಮಾತನಾಡಿದ ಅವರು ಧಾರ್ಮಿಕ, ಸಾಂಸ್ಕೃತಿಕ ಕಲಾಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಶ್ರದ್ಧೆಯನ್ನು ಶ್ಲಾಘಿಸಿದರು ಹಾಗೂ ಗೋಪಾಲ ಕೃಷ್ಣ ದೇವಸ್ಥಾನದ 108ನೇ ವರ್ಷದ ಮೊಸರುಕುಡಿಕೆ ಉತ್ಸವದ ಯಶಸ್ಸಿಗೆ ಎಲ್ಲ ಭಕ್ತಾದಿಗಳು, ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದರು.
ಸಂಘಟನೆಯ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. ಗೌರವ ಸಲಹೆಗಾರ ಧನಂಜಯ ಮೂಡುಬಿದಿರೆ ನಿರೂಪಿಸಿ, ಆ. 11ರಂದು ನಡೆಯಲಿರುವ ೩೩ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ ಹಾಗೂ ಆ. 27ರ ಮೊಸರುಕುಡಿಕೆ ಉತ್ಸವ, ಸಭಾ, ಸಾಂಸ್ಕೃತಿಕ ಕಲಾಪಗಳ ಪಕ್ಷನೋಟ ಇತ್ತರು.
ಗೌರವಾಧ್ಯಕ್ಷ ಬಿ.ಗಣೇಶ್ ರಾವ್, ನೂತನ ಸಂಚಾಲಕ ಬಿ. ಸುರೇಶ್ ರಾವ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನೂತನ ಪ್ರಧಾನ ಕಾರ್ಯದರ್ಶಿ ಸುಶಾಂತ್ ಕರ್ಕೇರ ವಂದಿಸಿದರು.
0 Comments