ಜ್ಞಾನಸುಧಾ ಆವರಣದಲ್ಲಿ ಡಾ। ಎಂ.ಮೋಹನ ಆಳ್ವರಿಗೆ ಅಭಿನಂದನೆ-ಸವ್ಯಸಾಚಿ ಸಂಭ್ರಮ
ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ '72'ನೇ ಹುಟ್ಟುಹಬ್ಬದ ಸಂದರ್ಭ, ಕಾರ್ಕಳ ಗಣಿತನಗರದ 'ಜ್ಞಾನಸುಧಾ' ಆವರಣದಲ್ಲಿ ಶುಕ್ರವಾರ ಸಂಜೆ ಡಾ| ಆಳ್ವರ ಕಾರ್ಕಳದ ಅಭಿಮಾನಿಗಳು ಸಂಯೋಜಿಸಿದ 'ಸವ್ಯಸಾಚಿ ಸಂಭ್ರಮ ಕಾರ್ಯಕ್ರಮದಲ್ಲಿ 72ರ ಆಳ್ವರ ಕುರಿತಾದ, 72 ಮಂದಿಯ ಲೇಖನಗಳಿರುವ 3೧೪ ಪುಟಗಳ 'ಸವ್ಯಸಾಚಿ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ ಕ್ರೀಡೆ ಎಲ್ಲದರಲ್ಲೂ ತೊಡಗಿಸಿಕೊಂಡು ಆನುವಮ ಸಾಧಕನಾಗಿ ನಮ್ಮ ಜತೆಗಿರುವ ಮೂಡುಬಿದಿರೆ ಡಾ| ಮಿಜಾರುಗುತ್ತು ಮೋಹನ ಆಳ್ವರು ರಾಷ್ಟ್ರೀಯತೆ, ಮನುಷ್ಯ ಪ್ರೀತಿಯಲ್ಲಿ ನಿಜಕ್ಕೂ 'ಸವ್ಯಸಾಚಿ" ಬಿರುದಿಗೆ ಪಾತ್ರರಾದವರು. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನಾಗಬಹುದು, ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಎಂದರು.
ಮೋಹನ ಆಳ್ವ ಅಲ್ಲ. ಅವರು ಮಹಾನ್ ಆಳ್ವ. ಅವರು ಸವ್ಯಸಾಚಿ. ಇನ್ನು ಮುಂದೆ ನಾವು ಅವರನ್ನು ಸವ್ಯಸಾಚಿ ಡಾ. ಮೋಹನ ಆಳ್ವರೆಂದೇ ಕರೆಯುತ್ತೇವೆ ಎಂದರು.
ಮೋಹನ ಆಳ್ವ ಆಧ್ಯಾತ್ಮಿಕ ಮನೋಭೂಮಿಕೆ ಹೊಂದಿರುವ ಅಪರೂಪದ ಸಾಧಕ. ಒಬ್ಬ ಮನುಷ್ಯನಾಗಿ ಅವರು ನಾಡು ನುಡಿಗೆ ಮಾಡಿದ ಸೇವೆಯನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ ಎಂದು ಹೆಗ್ಗಡೆಯವರು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರು, ಶಿಕ್ಷಣ, ಸಮಾಜ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮೋಹನ ಆಳ್ವ ಮಾಡಿರುವ ಸಾಧನೆ ಅನನ್ಯ. ಅವರು ಬಹಳ ಶ್ರೇಷ್ಠ ವ್ಯಕ್ತಿ ಎಂಬುದನ್ನು ಮುಂದಿನ ಜನಾಂಗ ಖಂಡಿತ ನೆನಪಿಟ್ಟುಕೊಳ್ಳುತ್ತದೆ ಎಂದರು.
ಪವಾಡ ಪುರುಷ- ಸಿಂಧ್ಯಾ ವರ್ಣನೆ
ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ, ಮೋಹನ ಆಳ್ವ ಓರ್ವ ಪವಾಡ ಪುರುಷ. ಆಳ್ವರು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ರಾಜಕೀಯದಿಂದ ದೂರ ಇದ್ದರೂ ರಾಜಕೀಯದಲ್ಲಿರುವವರನ್ನು ಗೌರವಿಸುತ್ತಾರೆ. ನಾವು ಅವರ 100ನೇ ಹುಟ್ಟುಹಬ್ಬವನ್ನೂ ಆಚರಿಸಬೇಕೆಂದರು.
ಆಧುನಿಕ ಕಾಲಘಟ್ಟದ ನಿಜವಾದ ಸವ್ಯಸಾಚಿ - ಸುನಿಲ್
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಮಹಾಭಾರತ ಕಾಲಘಟ್ಟದಲ್ಲಿ ಅರ್ಜುನ ಸವ್ಯಸಾಚಿಯಾಗಿದ್ದರು. ಆಧುನಿಕ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಎಲ್ಲದರಲ್ಲೂ ಪರಿಪೂರ್ಣತೆಯನ್ನು ಸಾಧಿಸಿದ ಮೋಹನ ಆಳ್ವರೊಬ್ಬರೇ ಸವ್ಯಸಾಚಿ. ಈ ಕಾರಣಕ್ಕೆ ಅವರ ಅಭಿನಂದನಾ ಗ್ರಂಥಕ್ಕೆ ಸವ್ಯಚಾಚಿ ಎಂದು ಹೆಸರಿಟ್ಟಿದ್ದೇವೆ ಎಂದರು.
ಆಳ್ವರಿಗೆ ಸದಾ ಹೊಸತನದ ತುಡಿತ ಇದೆ. ಪ್ರತಿಸಲ ಭೇಟಿಯಾದಾಗ ಅವರು ಹೊಸ ವಿಚಾರ ತಿಳಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದೆ. ಕಾರ್ಕಳದ ಅಭಿಮಾನಿಗಳು ಸೇರಿ 72ನೇ ವಯಸ್ಸಿನಲ್ಲಿ ಅವರನ್ನು ಅಭಿನಂದಿಸುತ್ತಿರುವುದು 75 ಆಗುವಾಗ ಮೂಡುಬಿದಿರೆಯವರು ಇದಕ್ಕೂ ಮಿಗಿಲಾದ ಸಂಭ್ರಮದ ಕಾರ್ಯಕ್ರಮ ಮಾಡಬೇಕು ಎಂಬ ಸಂದೇಶ ಈ ಮೂಲಕ ರವಾನೆಯಾಗಿದೆ. 72 ಲೇಖಕರ ಲೇಖನವನ್ನೊಳಗೊಂಡಿರುವ ಸವ್ಯಸಾಚಿ ಒಂದು ಸಂಗ್ರಹ ಯೋಗ್ಯ ಕೃತಿ ಎಂದರು.
ಆಳ್ವರ ಸಂಸ್ಥೆಯಲ್ಲಿ ದುಡಿದವರು, ಅವರ ವಿದ್ಯಾರ್ಥಿಗಳು ಸುತ್ತಮುತ್ತಲೇ ಹೊಸ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದಾಗ ಆಳ್ವರು ಮತ್ಸರ ಪಟ್ಟವರಲ್ಲ, ಅದನ್ನು ತನಗೆ ಪೈಪೋಟಿ ಎಂದು ಭಾವಿಸಲಿಲ್ಲ. ಬದಲಾಗಿ ಅವರಿಗೆಲ್ಲ ಸೂಕ್ತ ಮಾರ್ಗದರ್ಶನ ನೀಡಿ ಹರಸಿದರು. ಇಂಥ ಹೃದಯ ವೈಶಾಲ್ಯ ಅವರಿಗಿದೆ ಎಂದು ಆಳ್ವರ ವ್ಯಕ್ತಿತ್ವದ ಗುಣಗಾನ ಮಾಡಿದರು.
ಸವ್ಯಸಾಚಿಯೇ ನನ್ನ ಬದುಕಿನ ದಾಖಲೆ - ಆಳ್ವ
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ ಆಳ್ವ ಅವರು, ನಾನು ಯಾವ ಸಾಧನೆಯ ದಾಖಲೆಯನ್ನೂ ಇಟ್ಟಿಲ್ಲ. ಒಂದು ರೀತಿಯಲ್ಲಿ ನಾನು ಬಾಯಿಯಿಂದಲೇ ಎಲ್ಲವನ್ನೂ ಹೇಳುವ ಜಾನಪದ ಕಲಾವಿದ ಇದ್ದ ಹಾಗೆ. ಯಾವ ದಾಖಲೆ ಇಲ್ಲದಿದ್ದರೂ ನೆನಪಿನ ಮೂಲಕ ನಾನು ಬದುಕಿನ ಎಲ್ಲ ವಿಚಾರಗಳನ್ನು ತಿಳಿಸಬಲ್ಲೆ. ಈಗ ಶಾಸಕ ವಿ. ಸುನಿಲ್ ಕುಮಾರ್, ಡಾ. ಸುಧಾಕರ್ ಶೆಟ್ಟಿ, ನ್ಯೂಸ್ ಕಾರ್ಕಳ ಬಳಗ ಸಂಪಾದಿಸಿ ಹೊರತಂದ ಸವ್ಯಸಾಚಿ ಎಂಬ ಈ ಪುಸ್ತಕವೇ ನನ್ನ ಬದುಕಿನ ಮೊದಲ ಅಧಿಕೃತ ದಾಖಲೀಕರಣವಾಗಿದೆ. ಇನ್ನು ಯಾರಾದರೂ ದಾಖಲೆ ಕೇಳಿದರೆ ಈ ಪುಸ್ತಕವನ್ನೇ ನೀಡುತ್ತೇನೆ ಎಂದರು.
ನಾನು ಬುದ್ಧಿವಂತನಲ್ಲ
ನಾನು ಪಿಯುಸಿಯಲ್ಲಿ ಫೈಲ್ ಆದವ. ಯಾವ ತರಗತಿಯಲ್ಲೂ ಶೇ. 50ಕ್ಕಿಂತ ಹೆಚ್ಚು ಅಂಕ ನನಗೆ ದೊರೆತಿರಲಿಲ್ಲ. ಬದುಕಿನಲ್ಲಿ ನಾನಾ ರೀತಿಯ ಪಡಿಪಾಟಲು ಅನುಭವಿಸಿದವ. ಆದರೆ, ದೇವರು ಕೆಲವೊಂದು ವಿಶೇಷ ಗುಣಗಳನ್ನು ನನಗೆ ಕೊಟ್ಟಿದ್ದ. ಎಲ್ಲರನ್ನೂ ಪ್ರೀತಿಸಬೇಕು ಎಂಬ ಆಸೆ ಇಟ್ಟುಕೊಂಡವ. ಇದರಿಂದಲೇ ಬೆಳೆದೆ. ಶಾಲೆಯಲ್ಲಿ ಕಲಿತದ್ದಕ್ಕಿಂತ ಪ್ರಪಂಚದಿಂದ ಕಲಿತದ್ದು ಹೆಚ್ಚು. ಇಷ್ಟರ ತನಕ ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ, ಡಾ. ಸುಧಾಕರ ಶೆಟ್ಟಿಯವರ ಒತ್ತಾಯಕ್ಕೆ ಕಟ್ಟುಬಿದ್ದು ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಯಿತು. ದೀರ್ಘಕಾಲ ಹಾಸ್ಟೆಲ್‌ನಲ್ಲಿದ್ದು ಕಲಿತ ಕಾರಣ ಬದುಕಿನಲ್ಲಿ ಸಾಮರಸ್ಯದ ಪಾಠ ಸಿಕ್ಕಿತು. ಎಲ್ಲರ ಜತೆಗೆ ಒಂದಾಗಿ ಬಾಳುವ ಗುಣ ಬಂತು ಎಂದು ಆಳ್ವರು ತನ್ನ ಬಾಲ್ಯ ಕಾಲವನ್ನು ನೆನಪಿಸಿಕೊಂಡರು.
ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ಕಾಲಕಾಲಕ್ಕೆ ಅಪ್‌ಗ್ರೇಡ್ ಆಗಬೇಕು ಎನ್ನುವ ತುಡಿತ ನನ್ನದು. ಬದುಕಿಗೊಂಡು ಮೌಲ್ಯ ಇರಬೇಕು ಎಂದು ನಂಬಿ ಜೀವನ ನಡೆಸುತ್ತಿದ್ದೇನೆ. ಈ ದೇಶ, ಈ ಮಣ್ಣು ನನ್ನ ಸೆಳೆತ. ಇದನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ತೀರ್ಮಾನಿಸಿದ್ದೇನೆ ಎಂದರು.
ಬಾಕ್ಸ್-------
ಮದ್ಯ ಮುಟ್ಟವುದಿಲ್ಲ, ಧೂಮಪಾನ ಮಾಡುವುದಿಲ್ಲ. ಆದರೆ, ಇವೆರಡನ್ನೂ ಮಾರಿದ, ಅವುಗಳಿಗಾಗಿ ಪ್ರಚಾರ ಮಾಡಿದ ದಿನಗಳನ್ನು ಆಳ್ವರು ನೆನಪಿಸಿಕೊಂಡರು. ತಂದೆ ಆನಂದ ಆಳ್ವ ಆ ಕಾಲದಲ್ಲಿ ಸಾರಾಯಿ ಗುತ್ತಿಗೆದಾರರಾಗಿದ್ದ ಕಾರಣ ಸಾರಾಯಿ ಅಳೆದು ಸುರಿಯುವ ಕೆಲಸವನ್ನು ಮಾಡಬೇಕಿತ್ತು. ಆದರೆ, ತಪ್ಪಿಯೂ ಒಂದು ಹನಿ ಸಾರಾಯಿಯನ್ನು ನಾಲಗೆಗೆ ಸೋಕಿಸಿಕೊಂಡವನಲ್ಲ . ಇದಕ್ಕೂ ಮಿಗಿಲಾದದ್ದು ಬೀಡಿ ಮಾರಾಟದ ಕಥೆ. ತಂದೆಯವರು ಮೀನಾಕ್ಷಿ ಎಂಬ ಹೆಸರಿನಲ್ಲಿ ಬೀಡಿ ಉದ್ಯಮವನ್ನು ನಡೆಸುತ್ತಿದ್ದರು. ಆ ದಿನಗಳಲ್ಲಿ ಜಾತ್ರೆ, ಕಂಬಳದಂಥ ಜನಸೇರುವ ಜಾಗದಲ್ಲಿ ಇದರ ಪ್ರಚಾರ ಮಾಡಬೇಕಿತ್ತು ಎಂದು ಆಳ್ವರು ಇದೇ ಸಂದರ್ಭದಲ್ಲಿ ತನ್ನ ಬಾಲ್ಯವನ್ನು ನೆನಪಿಸಿಕೊಂಡರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಆಳ್ವರ ಕುರಿತು ಪುಸ್ತಕ ಹೊರತಂದಿರುವುದು ನಮ್ಮಲ್ಲಿ ಧನ್ಯತಾಭಾವ ಮೂಡಿಸಿದೆ. ಪುಸ್ತಕ ಸುಂದರವಾಗಿ ಮೂಡಿಬರುವಲ್ಲಿ ನ್ಯೂಸ್ ಕಾರ್ಕಳ ಬಳಗ, ವಿಶೇಷವಾಗಿ ಪದ್ಮಪ್ರಸಾದ್ ಜೈನ್, ಜಿನೇಶ್ ಪ್ರಸಾದ್ ಅವರ ಸಹಕಾರವಿದೆ. ಈ ಕೃತಿಯನ್ನು ಪೂಜ್ಯ ಖಾವಂದರು, ಮೇರು ವ್ಯಕ್ತಿತ್ವದ ವಿನಯ ಹೆಗ್ಡೆ ಹಾಗೂ ವಿ. ಸುನಿಲ್ ಕುಮಾರ್ ಅವರು ಬಿಡುಗಡೆಗೊಳಿಸುತ್ತಿರುವುದು ಸಂತಸದ ವಿಚಾರವೆಂದರು.
ಸುಂದರ ಪೇಟ, ಆಳೆತ್ತರದ ಸ್ಮರಣಿಕೆ
ಆಳ್ವರನ್ನು ಕಾರ್ಕಳದ ಅಭಿಮಾನಿಗಳ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸುಂದರವಾದ ಪೇಟ, ಆಳೆತ್ತರದ ಸ್ಮರಣಿಕೆ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಬಂತು ಸವ್ಯಸಾಚಿ
ಸವ್ಯಸಾಚಿ ಅಭಿನಂದನಾ ಗ್ರಂಥವನ್ನು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಸವ್ಯ ಮತ್ತು ಸಾಚಿ ಎಂಬಿಬ್ಬರು ಸಹೋದರಿಯರು ವೇದಿಕೆಗೆ ಮೆರವಣಿಗೆಯಲ್ಲಿ ತಂದರು. ಬಳಿಕ ಡಾ. ವೀರೇಂದ್ರ ಹೆಗ್ಗಡೆಯವರು ಕೃತಿಯನ್ನು ಅನಾವರಣಗೊಳಿಸಿದರು.
ಅಭಿನಂದನಾ ಗೀತೆ
ಆಳ್ವರ ಕುರಿತಾಗಿ ಜ್ಞಾನಸುಧಾ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಉಪನ್ಯಾಸಕರಾದ ಸಂತೋಷ್ ನೆಲ್ಲಿಕಾರು ಮತ್ತು ಪ್ರಜ್ವಲ್ ಕುಲಾಲ್ ಅವರು ರಚಿಸಿರುವ ಅಭಿನಂದನಾ ಗೀತೆಯನ್ನು ಶಿಕ್ಷಕ ಯೋಗೀಶ್ ಕಿಣಿಯವರ ಕಂಠಸಿರಿಯಲ್ಲಿ ಮೂಡಿಬಂತು.
ಆರ್ಥಿಕ ನೆರವು
ಆಳ್ವರ ಹುಟ್ಟುಹಬ್ಬದ ಪ್ರಯುಕ್ತ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಆರೋಗ್ಯ ಸಮಸ್ಯೆಯುಳ್ಳ 10 ಮಂದಿಗೆ ಹಾಗೂ ಸಮಾಜ ಸೇವೆ ಮಾಡುತ್ತಿರುವ 5 ಸಂಘ ಸಂಸ್ಥೆಗಳಿಗೆ ತಲಾ 10 ಸಾ. ರೂ. ಮತ್ತು ಡಾ. ಟಿ.ಎಂ.ಪೈ. ರೋಟರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೊಳಗಾಗುವ ರೋಗಿಗಳ ಶುಶ್ರೂಷೆಗಾಗಿ 2 ಲಕ್ಷ ರೂ. ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸಚೇತಕ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ರಘುಪತಿ ಭಟ್ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶರತ್ ಆಚಾರ್ಯ ತತ್ವ ಗೀತೆ ಹಾಡಿದರು. ಉಪನ್ಯಾಸಕಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಕುಮಾರ್ ಜೈನ್ ವಂದಿಸಿದರು.
0 Comments