ಹೆತ್ತವರ ಕಿರುಕುಳವೇ ಪ್ರೇಮಿಗಳ ಸಾವಿಗೆ ಕಾರಣವಾಯ್ತೇ..?
ಮೂಡುಬಿದಿರೆ: ಒಬ್ಬರನೊಬ್ಬರು ಬಿಟ್ಟು ಬದುಕಲಾರೆವು ಎಂದು ಪ್ರೀತಿಸಿದ್ದ ಜೋಡಿಯೊಂದು ಹೆತ್ತವರ ಕಿರುಕುಳಕ್ಕೆ ನೊಂದು ಒಂದೆರಡು ದಿನದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಗೆ ಅಂತ್ಯ ಕಂಡು ಕೊಂಡಿದ್ದಾರೆ.
ಮೂಲ್ಕಿಯಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ 19ರ ಹರೆಯದ ಮೂಡುಬಿದಿರೆಯ ಯುವತಿ ಶರಣ್ಯ ಮತ್ತು ಮೂಲ್ಕಿಯ 20 ರ ಹರೆಯದ ಯುವಕ ಕಾರ್ತಿಕ್ ಪೂಜಾರಿ "ಲವ್" ಗೆ ಬಿದ್ದಿದ್ದರು. ಮೂಲ್ಕಿಯ ಅಜ್ಜಿ ಮನೆಯಲ್ಲಿದ್ದುಕೊಂಡೇ ಕಾಲೇಜಿಗೆ ತೆರಳುತ್ತಿದ್ದಳು ಈ ಯುವತಿ. ಕಳೆದ ನಾಲ್ಕು ತಿಂಗಳ ಹಿಂದೆ ಈ ಜೋಡಿಯು ಹೊರಗಡೆ ತಿರುಗಾಡಲು ಹೋಗಿದ್ದಾಗ ಹೆತ್ತವರಿಗೆ ಗೊತ್ತಾಗಿ ಅವರಿಬ್ಬರನ್ನು ಊರಿಗೆ ಕರೆದುಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ಬುದ್ಧಿ ಮಾತು ಹೇಳಿ ಅವರವರ ಮನೆಗೆ ಕಳುಹಿಸಿ ಕೊಟ್ಟಿದ್ದಾರೆನ್ನಲಾಗಿದೆ. ಮುಂದೆ ಹುಡುಗ ಮದುವೆ ವಯಸ್ಸಿಗೆ ಬಂದಾಗ ಮದುವೆ ಮಾಡಿಕೊಡುವುದಾಗಿಯೂ ಈ ಸಂದರ್ಭದಲ್ಲಿ ಮಾತುಕತೆಯೂ ನಡೆದಿತ್ತೆನ್ನಲಾಗಿದೆ.
ನಂತರ ಯುವತಿಯನ್ನು ಮೂಡುಬಿದಿರೆಯಲ್ಲಿದ್ದ ಹೆತ್ತವರೊಂದಿಗೆ ಕಳುಹಿಸಿಕೊಡಲಾಗಿತ್ತು. ಕಾಲೇಜಿಗೆ ತೆರಳದ ಯುವತಿ ಮನೆಯಲ್ಲಿಯೇ ಉಳಿದುಕೊಂಡಿದ್ದಲೆನ್ನಲಾಗಿದೆ ಹುಡುಗ ಉದ್ಯೋಗ ನಿಮಿತ್ತ ಚಿತ್ರದುರ್ಗಕ್ಕೆ ತೆರಳಿದ್ದ . ಇತ್ತ ಮಾನಸಿಕವಾಗಿ ನೊಂದ ಯುವತಿ ಮನೆಯ ಹೊರಗಡೆ ಎಲ್ಲಿಗೂ ಹೋಗದೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಳು ನಂತರ ಕೆಲವೇ ದಿನಗಳಲ್ಲಿ ಮನೆಯ ಹೊರಗಡೆಯೂ ಬಾರದೆ ಮನೆಯ ಒಂದೇ ಕೋಣೆಯಲ್ಲಿ ಉಳಿದುಕೊಳ್ಳಲು ಆರಂಭಿಸಿದಳು. ಅಲ್ಲದೆ ಹೆತ್ತವರೊಂದಿಗೆ ಮಾತು ಕಡಿಮೆ ಮಾಡಿದ್ದಲೆನ್ನಲಾಗಿದೆ.
ಹೆತ್ತವರ ಅತಿಯಾದ ಬುದ್ಧಿ ಮಾತಿಗೋ ಅಥವಾ ಶಿಸ್ತಿನ ಕ್ರಮಕ್ಕೋ ಮಾನಸಿಕ ಹಿಂಸೆಯನ್ನು ಅನುಭವಿಸಿ ನೊಂದ ಯುವತಿ ನೇಣಿಗೆ ಶರಣಾಗುವ ಮೂಲಕ ತನ್ನ ಬದುಕಿಗೆ ತಿಲಾಂಜಲಿ ಇಟ್ಟಿದ್ದಾಳೆ.
ವಿಪರ್ಯಾವೆಂದರೆ ಯುವತಿ ಗುರುವಾರ ಮಧ್ಯಾಹ್ನದಿಂದ ತನ್ನ ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲವೆಂದು ಯುವತಿಯ ಹೆತ್ತವರಿಗೆ ಯುವತಿಯ "ಲವರ್" ಶುಕ್ರವಾರದಂದು ಕರೆ ಮಾಡಿ ತಿಳಿಸಿದ್ದಾನೆನ್ನಲಾಗಿದೆ. ಆ ನಂತರವೇ ಹೆತ್ತವರು ತಮ್ಮ ಮಗಳ ಕೋಣೆಯನ್ನು ಪರೀಕ್ಷಿಸಿದ್ದಾರೆನ್ನಲಾಗಿದೆ.
ತನ್ನ ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆಂದು ತಿಳಿದ ಪ್ರಿಯತಮ ತಕ್ಷಣ ಚಿತ್ರದುರ್ಗದಿಂದ ಹೊರಟು ಶನಿವಾರು ಮೂಲ್ಕಿಗೆ ಬಂದಿದ್ದಾನೆ. ಆತನ ತಾಯಿ ತುರ್ತು ಕಾರ್ಯದ ನಿಮಿತ್ತ ಕೇರಳಕ್ಕೆ ತೆರಳಿದ್ದರು. ಇತ್ತ ತನ್ನ ಪ್ರೇಯಸಿಯನ್ನು ಕಳೆದುಕೊಂಡು ಮಾನಸಿಕವಾಗಿ ನೊಂದ ಯುವಕ ಕಾರ್ತಿಕ್ ಪೂಜಾರಿ ತಮ್ಮ ಮನೆಯ ಸಮೀಪದಲ್ಲಿರುವ ಮೊಯಿಲೊಟ್ಟು ರೈಲ್ವೇ ಪಟ್ಟಿ ಬಳಿ ಬೆಳಿಗ್ಗೆ 11.19 ರ ವೇಳೆಗೆ ಮಂಗಳೂರಿನಿಂದ ಮುರುಡೇಶ್ವರಕ್ಕೆ ತೆರಳುವ ರೈಲಿನಡಿಗೆ ತಲೆಯನ್ನಿಟ್ಟು ಜೀವವನ್ನು ಕಳೆದುಕೊಂಡಿದ್ದಾನೆ.
ಒಂದೆರಡು ವರ್ಷಗಳ ನಂತರ ಹಸೆಮಣೆ ಏರಿ ಸತಿಪತಿಗಳಾಗಿ ಬಾಳಬೇಕಾಗಿದ್ದ "ಪ್ರೀತಿ" ಯ ಜೋಡಿಯೊಂದು ಹೆತ್ತವರ ಪ್ರತಿಷ್ಠೆಗಾಗಿ ಪ್ರಾಣವನ್ನು ಕಳೆದುಕೊಂಡು ಅಂತ್ಯವನ್ನು ಕಂಡಿರುವುದು ದುರಂತವೇ ಸರಿ.
0 Comments