ದಮಾಮ್‌ನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಕೋಟೆಬಾಗಿಲು ಮೂಲದ ಮಗು ಮೃತ್ಯು
ಮೂಡುಬಿದಿರೆ: ಸೌದಿ ಅರೇಬಿಯಾದ ದಮಾಮ್ ನಲ್ಲಿ ಶನಿವಾರ ರಾತ್ರಿ ಮನೆಯ ಫ್ರಿಡ್ಜ್ ಸ್ಪೋಟಗೊಂಡು ಉಂಟಾದ ಅಗ್ನಿ ದುರಂತದಲ್ಲಿ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನ ಮೂರು ವರ್ಷದ ಗಂಡು ಮಗು ಸಾವನಪ್ಪಿದ್ದು ಇನ್ನೊಂದು ಮಗು ಹಾಗೂ ತಂದೆ ತಾಯಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫಹದ್ ಅವರ ಮಗ ಸಾಯಿಕ್ ಶೇಖ್(೩)ಮೃತಪಟ್ಟ ಮಗು. ಫಹದ್ ಹಾಗೂ ಇವರ ಪತ್ನಿ ಸಲ್ಮಾ ಕಾಝಿ ಇನ್ನೋರ್ವ ಪುತ್ರ ಶಾಹಿದ್ ಶೇಖ್(೫)ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಸಲ್ಮಾ ಮತ್ತು ಶಾಹಿದ್ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ ಗಂಭೀರ ಗಾಯಗೊಂಡಿದ್ದ ಫಹದ್ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫಹಾದ್ ಕುಟುಂಬ ವಾಸ್ತವ್ಯವಿದ್ದ ಮನೆಯ ಫ್ರಿಡ್ಜ್ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಪೋಟಗೊಂಡು ಗ್ಯಾಸ್ ಸೋರಿಕೆಯಾಗಿ ಬೆಂಕಿ ಹಚ್ಚಿಕೊಂಡಿತ್ತೆನ್ನಲಾಗಿದೆ. ಈ ಸಂದರ್ಭ ಮನೆಯವರು ನಿದ್ರೆಯಲ್ಲಿದ್ದರೆನ್ನಲಾಗಿದೆ. ಹವಾ ನಿಯಂತ್ರಿತ ಕೋಣೆಯಲ್ಲಿ ಹೊಗೆ ಆವರಿಸಿ ಹೊರಗೆ ಹೋಗಲಾಗದೆ ದುರಂತ ಸಂಭವಿಸಲು ಕಾರಣ ಎನ್ನಲಾಗಿದೆ. ಲೋಕಸಭೆ ಚುನಾವಣೆ ಸಂದರ್ಭ ಊರಿಗೆ ಬಂದಿದ್ದ ಕುಟುಂಬ ಮತದಾನ ಮಾಡಿ ಬಳಿಕ ದಮಾಮ್‌ಗೆ ಹಿಂತಿರುಗಿತ್ತೆನ್ನಲಾಗಿದೆ.
0 Comments