ಚುನಾವಣಾ ಕರ್ತವ್ಯದ ಖಾಸಗಿ ವಾಹನಗಳಿಗೆ ಡೀಸೆಲ್, ಪೆಟ್ರೋಲ್ ನೀಡದ ಅಧಿಕಾರಿಗಳು
ಮೂಡುಬಿದಿರೆ : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಖಾಸಗಿ ಕಾರು, ವ್ಯಾನುಗಳಿಗೆ ಅಧಿಕಾರಿಗಳು ಡೀಸೆಲ್ ಮತ್ತು ಪೆಟ್ರೋಲ್ ನೀಡದಿರುವುದರಿಂದ ವಾಹನ ಮಾಲಕರು ಮತ್ತು ಚಾಲಕರು ಗೋಳಾಡುವಂತ್ತಾಗಿದೆ.
ಚುನಾವಣಾ ಕರ್ತವ್ಯಕ್ಕೆ ಹಾಜರಾಗಿರುವ ಸಿಬಂದಿಗಳು, ಪೊಲೀಸರನ್ನು ಮತ್ತು ವಿವಿಧ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗಲು ಮತ್ತು ಕರೆದುಕೊಂಡು ಬರಲೆಂದು ಟೆಂಡರ್ ಮೂಲಕ ನಾಲ್ಕು ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ವಾಹನಗಳಿಗೆ ಡಿಸೇಲ್ ಮತ್ತು ಪೆಟ್ರೋಲ್ ನ್ನು ಜಿಲ್ಲಾಧಿಕಾರಿಗಳು ಹಾಕಿಸದಿರುವುದರಿಂದ ವಾಹನ ಚಾಲಕರು ಮತ್ತು ಮಾಲಕರು ಪರದಾಡುವಂತ್ತಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಖಾಸಗಿ ವಾಹನಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ನ್ನು ಮೊದಲೇ ನೀಡಿದ್ದರು. ಆದರೆ ಬಾಡಿಗೆ ಮಾತ್ರ ಇನ್ನೂ ಪಾವತಿಯಾಗಿಲ್ಲ. ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲೂ ಇಲ್ಲ ಬಾಡಿಗೆಯೂ ಇಲ್ಲದಂತ್ತಾಗುತ್ತದೋ ಎಂಬ ಆತಂಕದಲ್ಲಿ ವಾಹನಗಳ ಚಾಲಕರು ಮತ್ತು ಮಾಲಕರಿದ್ದಾರೆ. ರಾತ್ರಿ ವಸತಿ, ಊಟದ ವ್ಯವಸ್ಥೆಯೂ ಇಲ್ಲದಿರುವುದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಕರಗಳ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಿ ನ್ಯಾಯ ಒದಗಿಸಿಕೊಡಬೇಕಾಗಿದೆ.
0 Comments