ಮೂಡುಬಿದಿರೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ
ಪ್ರೀತಿ, ವಿಶ್ವಾಸ, ಪರಿಶ್ರಮದಿಂದ ಯಶಸ್ಸು ಸಾಧ್ಯ: ಬ್ರಿಜೇಶ್ ಚೌಟ
ಮೂಡುಬಿದಿರೆ: ದ.ಕ. ಸಂಘಟನಾತ್ಮಕ ಜಿಲ್ಲೆ. ವಿಚಾರದ ಆಧಾರದಲ್ಲಿ, ಕಾರ್ಯಕರ್ತರ ಆಧಾರದಲ್ಲಿ ಸಂಘಟನೆಯನ್ನು ಕಟ್ಟಿದ ಜಿಲ್ಲೆ ಇಂತಹ ಜಿಲ್ಲೆಯಲ್ಲಿ ಕಾರ್ಯಕರ್ತರ ಪ್ರೀತಿ, ವಿಶ್ವಾಸ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದು ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದರು. ಮತ್ತು ಅವರು ಕನ್ನಡ ಭವನದಲ್ಲಿ ಶನಿವಾರ ನಡೆದ ಮೂಡುಬಿದಿರೆ ನಗರ, ಪುತ್ತಿಗೆ ಮತ್ತು ಶಿರ್ತಾಡಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರನ್ನು, ಬಡವರನ್ನು, ಮಹಿಳೆಯರನ್ನು ಮತ್ತು ಯುವ ಸಮುದಾಯ ಹೀಗೆ ಎಲ್ಲಾ ವರ್ಗದ ಜನರನ್ನು ತಲುಪಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ ಆದ್ದರಿಂದ ಈ ಚುನಾವಣೆಯಲ್ಲಿ ಅವರು 400 ಸ್ಥಾನಗಳನ್ನು ಪಡೆಯುವ ವಿಶ್ವಾಸವನ್ನು ಹೊಂದಿದ್ದಾರೆ.
ಆದ್ದರಿಂದ ಬಹಳ ವಿಶೇಷವಾದ ಮತ್ತು ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ, ಹಿಂದುತ್ವದ ಪ್ರತಿಷ್ಠಾಪನೆ ಮತ್ತು ಹಿಂದೂ ಸಮಾಜವನ್ನು ಗೌರವಿಸುವಂತಹ ಚುನಾವಣೆ ಇದು ಎಂಬ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯಕರ್ತರು ಶ್ರಮಿಸಿ ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಮಾಡಬೇಕಾಗಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ದ.ಕ.ದಲ್ಲಿ ಬಿಜೆಪಿಗೆ ಹಿನ್ನಡೆಯಾಗಿಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷದ ಕಪಟ ನಾಟಕ ಮತ್ತು ಪಂಚ ಗ್ಯಾರಂಟಿಗಳಿಗೆ ಮತದಾರ ಕಿವಿಕೊಟ್ಟಿಲ್ಲ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಮೋಸದಿಂದ ಗೆದ್ದಿದ್ದಾರೆ ಎಂದು ಆರೋಪಿಸಿದರು.
ಸೇಡಿನ ರಾಜಕರಣ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಪಂಚ ಗ್ಯಾರಂಟಿಗಳಿಗೆ ಅನುದಾನ ನೀಡಲೂ ಹಣ ಇಲ್ಲದಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಒಂದು ವರ್ಷದಿಂದ ಒಂದು ಪೈಸೆ ಅನುದಾನವನ್ನು ನೀಡಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಅಡಿಕೆ, ಕೊಪ್ಪರ ಖರೀದಿ ಕೇಂದ್ರ ಮಾಡದೆ ಕೃಷಿಕರಿಗೆ ಅನ್ಯಾಯವೆಸಗಿದ್ದಾರೆಂದ ಅವರು ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಬದಲಾಯಿಸಿ ವಿಶ್ವ ವಿಖ್ಯಾತಿಗೊಳಿಸಿದ್ದಾರೆ. ಇದೀಗ ಕನ್ನಡ, ಹಿಂದಿ, ಇಂಗ್ಲೀಷನ್ನು ಸುಲಲಿತವಾಗಿ ಮಾತನಾಡಬಲ್ಲ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು ಗೆಲ್ಲುವ ವಿಶ್ವಾಸವನ್ನು ಹೊಂದಿದೆ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ ಎಂ., ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಚುನಾವಣಾ ಪ್ರಭಾರಿ ಚಂದ್ರಶೇಖರ ಬಪ್ಪಳಿಕೆ, ಎಸ್ .ಸಿ.ಮೋರ್ಚಾದ ಅಧ್ಯಕ್ಷ ಜಗನ್ನಾಥ್, ಮಾಜಿ ಮಂಡಲಾಧ್ಯಕ್ಷ ಸುನೀಲ್ ಆಳ್ವ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ನಾಗವರ್ಮ ಜೈನ್, ಲಕ್ಷ್ಮಣ್ ಪೂಜಾರಿ, ಸೋಮನಾಥ ಕೋಟ್ಯಾನ್, ಕ್ರೈಸ್ತ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಜೊಯ್ಲಸ್ ತಾಕೋಡೆ ಪ್ರಮುಖರಾದ ಶಾಂತಿ ಪ್ರಸಾದ್ ಹೆಗ್ಡೆ, ಭುವನಾಭಿರಾಮ ಉಡುಪ, ಕೆ.ಆರ್.ಪಂಡಿತ್, ಕೃಷ್ಣರಾಜ್ ಹೆಗ್ಡೆ, ಪ್ರಸಾದ್ ಕುಮಾರ್, ಸುಕೇಶ್ ಶೆಟ್ಟಿ, ಬೆಳುವಾಯಿ ಭಾಸ್ಕರ ಆಚಾರ್ಯ, ಗೋಪಾಲ್ ಶೆಟ್ಟಿಗಾರ್, ಅಶ್ವತ್ಥ್ ಪಣಪಿಲ, ಮತ್ತಿತರರು ಉಪಸ್ಥಿತರಿದ್ದರು. ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಸ್ವಾಗತಿಸಿದರು.
ಚುನಾವಣಾ ಸಂಚಾಲಕ ಈಶ್ವರ ಕಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಭರವಸೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನಾಹುತಗಳೇ ಜಾಸ್ತಿ ಆದ್ದರಿಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಐವತ್ತು ಸಾವಿರ ಅಧಿಕ ಮತಗಳಿಂದ ಗೆಲ್ಲಿಸುವಂತಹ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬ್ರಿಜೇಶ್ ಚೌಟ ಟೆಂಪಲ್ ರನ್ : ಕಾರ್ಯಕರ್ತರ ಸಭೆಗೂ ಮುನ್ನ ಜೈನ ಮಠ ಹಾಗೂ ಮೂಡುಬಿದಿರೆಯ ವಿವಿಧ ದೇವಸ್ಥಾನಗಳಾದ ಹನುಮಂತ, ವೆಂಕಟರಮಣ, ಮಾರಿಗುಡಿ, ಕಾಳಿಕಾಂಬಾ, ಕೊಡ್ಯಡ್ಕ ಮತ್ತು ಪುತ್ತಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
0 Comments