ಸಾಮೂಹಿಕ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ, ಒಕ್ಕೂಟ ಪದಗ್ರಹಣ
ಮೂಡುಬಿದಿರೆ: ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ (ರಿ) ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಆಲಂಗಾರು ವಲಯ ಇದರ ಆಶ್ರಯದಲ್ಲಿ ಬನ್ನಡ್ಕ ರಾಘವೇಂದ್ರ ಮಠದ ಪಾಂಚಜನ್ಯ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ ಮತ್ತು 9 ಒಕ್ಕೂಟಗಳ ಪದಗ್ರಹಣ ಸಮಾರಂಭವು ಭಾನುವಾರ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಿಂದಿನ ಜೀವನ ಕಷ್ಟಕರ ಮತ್ತು ಕ್ಲಿಷ್ಟಕರವಾಗಿತ್ತು. ಗಂಡಸರು ಮಾತ್ರ ಹೊರಗೆ ಹೋಗಿ ದುಡಿಯುವ ಅವಕಾಶವಿತ್ತು ಮಹಿಳೆಯರು ಮನೆಯ ಒಳಗಡೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಆ ದಿನಗಳಲ್ಲಿ ದುಡಿಯುವ ಕೈಗಳ ಕೊರತೆಯಿತ್ತು ದುಶ್ಚಟಗಳು ಮನೆ ಮಾಡಿದ್ದವು. ನಾವು ನೆಮ್ಮದಿಯಿಂದ ನಿಟ್ಟುಸಿರನ್ನು ಬಿಟ್ಟು ಜೀವನವನ್ನು ನಡೆಸಲು ಹಲವಾರು ಯೋಜನೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ನೀಡಿದೆ. ಮಹಿಳೆಯರಿಗೆ ಅವಕಾಶ ಸಿಕ್ಕಿದರೆ ತಾನು ತನ್ನ ಕಾಲ ಮೇಲೆ ನಿಂತು ತನ್ನ ಕುಟುಂಬವನ್ನು ಉತ್ತಮವಾಗಿ ನಿಭಾಯಿಸಬಲ್ಲಳು ಎಂಬುದನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆ ತೋರಿಸಿಕೊಟ್ಟಿದ್ದಾಳೆ.
ಮಹಿಳೆಯರು ಸಬಲರಾಗುವ ಮೂಲಕ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬುದನ್ನು ಅರಿತುಕೊಂಡಿದ್ದಾಳೆ ಮತ್ತು ಕಲಿತುಕೊಂಡಿದ್ದಾಳೆ ಇದೆಲ್ಲಾ ಸಾಧ್ಯವಾಗಿದ್ದು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಎಂದರು.
ಆಲಂಗಾರು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು.
ವಾಗ್ಮಿ ಆದರ್ಶ ಗೋಖಲೆ ಧಾರ್ಮಿಕ ಉಪನ್ಯಾಸ ನೀಡಿ ಸಂಘಟನೆಯಿಂದ ಸ್ವಾವಲಂಬಿ ಬದುಕು ಸಾಧ್ಯ. ಭಗವಂತನು ಒಲಿಯುವುದು ಭಕ್ತಿಗೆ ಆದ್ದರಿಂದ ಮಂಜುನಾಥನನ್ನು ನೆನಪಿಸಿಕೊಳ್ಳಿ ಎಂದ ಅವರು ಮಕ್ಕಳಿಗೆ ತಾಯಂದಿರುವ ದುಡ್ಡು ಮಾಡುವುದು ಹೇಗೆಂದು ಕಲಿಸುವುದು ಬೇಡ ಅವರ ಬೆಳವಣಿಗೆಗೆ ಸಂಸ್ಕಾರವೆಂಬ ಉತ್ತಮ ಶಿಕ್ಷಣವನ್ನು ನೀಡಿ ಎಂದು ಸಲಹೆ ನೀಡಿದರು.
ಡ್ರಾಮ ಜ್ಯೂನಿಯರ್ ನ ಬಾಲಪ್ರತಿಭೆ ಅಭೀಷ್ ಪೂಜಾರಿಯನ್ನು ಗೌರವಿಸಲಾಯಿತು.
ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಕೊಡಂಗಲ್ಲು ಒಕ್ಕೂಟವನ್ನು ಮತ್ತು ಸೇವಾಪ್ರತಿನಿಧಿ ಮಮತಾ ಅವರನ್ನು ಗುರುತಿಸಿ ಗೌರವಿಸಲಾಯಿತು. ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ವಾಸುದೇವ ಭಟ್, ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಬನ್ನಡ್ಕ ದೈವಸ್ಥಾನದ ಸುಕುಮಾರ್ ಬಲ್ಲಾಳ್, ಜಗತ್ಪಾಲ ಎಸ್.ಹೆಗ್ಡೆ, ಜನಾರ್ದನ ರಾವ್ ಪಾಡಿಮನೆ, ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
9 ಒಕ್ಕೂಟಗಳ ನೂತನ ಅಧ್ಯಕ್ಷರುಗಳು ಹಾಗೂ ನಿಕಟಪೂರ್ವ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಲಯ ಮೇಲ್ವೀಚಾರಕ ವಿಠಲ್ ಸ್ವಾಗತಿಸಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಸಮಿತಿಯ ಕೋಶಾಧಿಕಾರಿ ಜಯ ಬಿ.ಕೋಟ್ಯಾನ್ ವಂದಿಸಿದರು.
ಮಾರ್ನಾಡಿನ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ ಅವರ ನೇತೃತ್ವದಲ್ಲಿ ಸಾಮೂಹಿಕ ಪೂಜಾ ವಿಧಿ ವಿಧಾನ ನಡೆಯಿತು.
0 Comments