ಮೂಡುಬಿದಿರೆಯಲ್ಲಿ ಸೋಮಪ್ಪ ಸುವರ್ಣ ಸಂಸ್ಮರಣೆ
ಮೂಡುಬಿದಿರೆ: ಕೃಷಿ, ಶಿಕ್ಷಣ, ಸಮಾಜ ಸೇವೆಯಲ್ಲಿ ಕಾಯಾ ವಾಚಾ ಶುದ್ಧತೆಯಿಂದ ತನ್ನ ಯೋಚನೆ, ಯೋಜನೆಗಳನ್ನು ಸಮಾಜದ ಒಳಿತಿಗೆ ರೂಪಿಸಿ ಸಮಾಜದ ಜತೆಗೆ ಸಮುದಾಯಕ್ಕೂ ಶಕ್ತಿಯಾದವರು ಪ್ರಗತಿಪರ ಕೃಷಿಕ, ಶಿಕ್ಷಣ ತಜ್ಞ, ಸಾಮಾಜಿಕ ನೇತಾರ, ಮಾಜಿ ಶಾಸಕ ದಿ. ಕೆ. ಸೋಮಪ್ಪ ಸುವರ್ಣ ಅವರು ಎಂದು ತುಳು-ಕನ್ನಡ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಅವರು ರವಿವಾರ ಸಮಾಜ ಮಂದಿರದಲ್ಲಿ ಸೋಮಪ್ಪ ಸುವರ್ಣ ನೆರಳು-ನೆಂಪು ಸಮಿತಿ, ಮೂಲ್ಕಿ ವತಿಯಿಂದ ಮಾಜಿ ಶಾಸಕ ದಿ. ಕೆ. ಸೋಮಪ್ಪ ಸುವರ್ಣರ ಹನ್ನೆರಡನೇ ವರ್ಷದ ಸಂಸ್ಮರಣೆ ಹಾಗೂ 2024 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಮರಣಾ ಮಾತುಗಳನ್ನಾಡಿದರು.
ದೊರೆತ ರಾಜಕೀಯ ಶಕ್ತಿಯನ್ನು ಸಮಾಜಕ್ಕೆ ಧಾರೆಎರೆದ ಕಾರಣದಿಂದಾಗಿ ಜನತೆಯ ಮನಸ್ಸಲ್ಲಿ ಉಳಿದುಕೊಂಡಿದ್ದಾರೆ ಎಂದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಸೋಮಪ್ಪ ಸುವರ್ಣ ಅವರ ಸಮಾಜಮುಖಿ ಚಿಂತನೆಯ ಬದುಕು ಸಾಧನೆ ಯುವ ಪೀಳಿಗೆಗೆ ಸ್ಫೂರ್ತಿಯಾಗುವಂತಹದ್ದು ಎಂದರು.
ಮಾಜಿ ಸಚಿವ, ಸಮಿತಿಯ ಗೌರವಾಧ್ಯಕ್ಷ ಕೆ. ಅಭಯಚಂದ್ರ ಮಾತನಾಡಿ ಸೋಮಪ್ಪ ಸುವರ್ಣ ಬಡವರ ಧ್ವನಿಯಾಗಿದ್ದವರು ಎಂದು ಶ್ಲಾಘಿಸಿದರು.
ಪ್ರಶಸ್ತಿ ಪ್ರದಾನ :
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ವಾಲ್ಪಾಡಿ ಆನೆಗುಡ್ಡೆಯ ನಾಬರ್ಟ್ ಪಿರೇರ, ಸಮಾಜ ಸೇವಕ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್ ಹಾಗೂ ಕೃಷಿ ಕ್ಷೇತ್ರದ ಸಾಧಕ ನಾಗರಾಜ ಶೆಟ್ಟಿ ಅಂಬೂರಿ ಅವರಿಗೆ 2024 ನೇ ಸಾಲಿನ ಸೋಮಪ್ಪ ಸುವರ್ಣ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೊಸ್ಸಿ ಪಿಂಟೋ ಕಿನ್ನಿಗೋಳಿ ಸಮ್ಮಾನಿತರನ್ನು ಅಭಿನಂದಿಸಿ ವಿವರ ನೀಡಿದರು.
ಪುತ್ರ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸುವರ್ಣ ವಂದಿಸಿದರು. ಜತೆ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು.
--
0 Comments