ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (ಅಟೋನೊಮಸ್)

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (ಅಟೋನೊಮಸ್)

 ಮೂಡುಬಿದಿರೆ: 


ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು ೨೦೨೩-೨೪ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಾಲೇಜಿಗೆ ೨೦೨೩-೨೪ರಿಂದ ಮುಂದಿನ ಹತ್ತು ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ೨೦೨೩ರ ಮೇ ೩೧ರಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾವಿಷಯಕ ಪರಿಷತ್ ಸಮಾಲೋಚನೆಯೊಂದಿಗೆ ಸಿಂಡಿಕೇಟ್ ಮಾಡಿರುವ ಶಿಫಾರಸ್ಸು ಅನುಸರಿಸಿ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಮತ ಸೂಚಿಸಿ ಆದೇಶಿಸಿದೆ ಎಂದು ತಿಳಿಸಿದರು.

ಮೌಲ್ಯಾಧಾರಿತ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆಯುವ ಕಾರಣ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಪದವಿಗಳನ್ನು ಇನ್ನಷ್ಟು ಕಾಲಬದ್ಧ ಹಾಗೂ ಸುಸಂಘಟಿತವಾಗಿ ನಡೆಸಲು ಅವಕಾಶವಾಗಲಿದೆ. ದಾಖಲಾತಿ, ಪರೀಕ್ಷೆ ಹಾಗೂ ಫಲಿತಾಂಶವನ್ನು ಸುಸಜ್ಜಿತವಾಗಿ ನಡೆಸಲು ಸಹಕಾರಿಯಾಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ವೇಗ ಸಿಗಲಿದೆ. ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸುಸಂಘಟಿತವಾಗಿ ಆಯೋಜಿಸಲು ಅನುವು ಮಾಡಿಕೊಡಲಿದೆ. ವೃತ್ತಿಪರತೆ ಹಾಗೂ ಆಧುನಿಕ ಕೈಗಾರಿಕೆ ಮತ್ತು ಉದ್ಯಮ ವಲಯಕ್ಕೆ ಬೇಕಾದ ಕೌಶಲಭರಿತ ತರಬೇತಿಗೆ ಅವಕಾಶ ಹೆಚ್ಚಲಿದೆ.

ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ರ‍್ಯಾಂಕ್), ಕ್ರೀಡಾ ಮತ್ತು ಸಾಂಸ್ಕೃತಿಕ ವಲಯದಲ್ಲಿ ಗಣನೀಯ ಸಾಧನೆ ಹಾಗೂ ಅತಿಹೆಚ್ಚಿನ ಉದ್ಯೋಗ ಗಳಿಕೆ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದೆ ಎಂದರು.

ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು.

---

ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ೧೯೯೮ರಲ್ಲಿ ಪ್ರಾರಂಭಿಸಿದ್ದು, ರಜತ ಮಹೋತ್ಸವದ ಹೊಸ್ತಿಲಲ್ಲಿದ್ದು, ಸ್ವಾಯತ್ತತೆ ದೊರೆತಿರುವುದು ಇನ್ನಷ್ಟು ಬಲ ನೀಡಿದೆ.

Post a Comment

0 Comments