ಡಿ.17 ರಂದು 21 ನೇ ವರ್ಷದ ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳ
ಮೂಡುಬಿದಿರೆ: ಇಲ್ಲಿನ 'ಕೋಟಿ-ಚೆನ್ನಯ' ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಇಪ್ಪತ್ತೊಂದನೇ ವರ್ಷದ ಹೊನಲು ಬೆಳಕಿನ 'ಕೋಟಿ-ಚೆನ್ನಯ' ಜೋಡುಕರೆ ಕಂಬಳವು ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ 'ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ'ದಲ್ಲಿ ಡಿ.17ರಂದು ನಡೆಯಲಿದೆ ಎಂದು ಮೂಡುಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಎ.ಉಮಾನಾಥ ಕೋಟ್ಯಾನ್ ತಿಳಿಸಿದರು.
ಮೊದಲಿಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8.00 ಗಂಟೆಗೆ ಎಂದಿನಂತೆ ಆಲಂಗಾರು ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ/ ಈಶ್ವರ ಭಟ್, ಆಲಂಗಾರು ಚಚ್ ೯ನ ಧರ್ಮಗುರು ರೆ/ಫಾ/ವಾಲ್ಟರ್ ಡಿ'ಸೋಜಾ, ಪುತ್ತಿಗೆ ನೂರಾನಿ ಮಸ್ಜೀದ್ ನ ಧರ್ಮಗುರು ಮೌಲಾನ ಝಿಯಾವುಲ್ಲ್ ಹಕ್ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ ಕಂಬಳವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಭಾ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಪುರಸಭಾ ಅಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಉದ್ಯಮಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗೌರವ ಸನ್ಮಾನ : ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ರಾಜೇಂದ್ರ ಕುಮಾರ್, ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ, ಬಹುಭಾಷಾ ಸಿನೆಮಾ ನಟ ಸುಮನ್ ತಲ್ವಾರ್ ಅವರಿಗೆ ಸಂಜೆ 21 ನೇ ವರ್ಷದ ಪ್ರತಿಷ್ಠಿತ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಗೌರವ ಸನ್ಮಾನ ನಡೆಯಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಗಾಲಿ ಜನಾರ್ಧನ ರೆಡ್ಡಿ ಭಾಗವಹಿಸಲಿದ್ದಾರೆ. ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಲಿದ್ದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡುರಾವ್ ಘನ ಉಪಸ್ಥಿತರಿರುವರು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ ಅವರು ಮಾತನಾಡಿ ಶೂನ್ಯ ತ್ಯಾಜ್ಯ ಪರಿಕಲ್ಪನೆಯಡಿ ನಡೆಯುವ ಈ ಕಂಬಳವನ್ನು ಸಮಯಕ್ಕೆ ಸರಿಯಾಗಿ ಆರಂಭಿಸುವ ಮತ್ತು ಮುಗಿಸುವ ಯೋಜನೆಯನ್ನು ಹೊಂದಿದ್ದೇವೆ. ಕಳೆದ ಬಾರಿ 276ಜೊತೆ ಕೋಣಗಳು ಮೂಡುಬಿದಿರೆ ಕಂಬಳ ಕೂಟದಲ್ಲಿ ಭಾಗವಹಿಸಿದ್ದು, ಈ ಬಾರಿ ಮತ್ತಷ್ಟು ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.
ಜಿಲ್ಲಾ ಕಂಬಳ ಸಮಿತಿಯು ಜಾರಿಗೊಳಿಸಿದ ಎಲ್ಲಾ ನಿಯಮ ಗಳನ್ನು ಈ ಕಂಬಳದಲ್ಲಿ ಪಾಲಿಸಲು ತೀರ್ಮಾನಿಸಲಾಗಿದೆ.
ಹಿರಿಯ ಕಂಬಳ ಕೊಣದ ಯಜಮಾನ, ಪ್ರಗತಿಪರ ಕೃಷಿಕ ಸುಂದರ ಕೆ. ಆಚಾರ್ಯ ಸಾಣೂರು, ಕಂಬಳದ ಹಿರಿಯ ಬರವಣಿಗೆಗಾರ ಸಂಕಪ್ಪ ಶೆಟ್ಟಿ ನಗ್ರಿ, ಗಂತಿನಲ್ಲಿ ಕೋಣಗಳನ್ನು ನಿಯಂತ್ರಿಸುವ ಹಿರಿಯರಾದ ದಾಮೋದರ ಪೂಜಾರಿ ಕಡಂದಲೆ ಹಾಗೂ ಕ್ರೀಡಾ ಪ್ರಶಸ್ತಿ ಪುರಸ್ಕೃತ ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.
ಕೆ. ಪ್ರಾಂಜಲ್ ಸ್ಮರಣೀಯ
ಸ್ವಾಗತ ಗೋಪುರ:
ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ ಕಂಬಳೋತ್ಸವ ಈ ವರ್ಷದ ಯೋಜನೆಯಾಗಿ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ಹಾಗೂ ಸ್ವಾಗತ ದ್ವಾರ ನಿರ್ಮಿಸಲಾಗುತ್ತಿದೆ. 2023ರ ಅವಧಿಯಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರುಗೊಂಡ ಅನುದಾನವನ್ನು ಬಳಸಿಕೊಂಡು ರಕ್ಷಣಾತ್ಮಕ ಮತ್ತು ಕಲಾತ್ಮಕ ಆವರಣ ಗೋಡೆ ನಿರ್ಮಾಣಕ್ಕೆ ಕಂಬಳ ಸಮಿತಿ ಕಾರ್ಯಯೋಜನೆ ರಚಿಸಿದೆ. ಆವರಣ ಗೋಡೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಆಕರ್ಷಣೀಯ ಸ್ವಾಗತ ಗೋಪುರಕ್ಕೆ ದೇಶದ ಗಡಿಯಲ್ಲಿ ಉಗ್ರರ ಧಾಳಿಗೆ ಪ್ರಾಣತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ನಾಮಕರಣಗೊಳಿಸಲು ಸಮಿತಿ ನಿರ್ಧರಿಸಿದೆ ಎಂದು ಕಂಬಳ ಸಮಿತಿ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದಿರೆ ಕಂಬಳ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕಾರ್ಯದರ್ಶಿ ರಂಜಿತ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ಪ್ರಮುಖರಾದ ಜಗದೀಶ್ ಅಧಿಕಾರಿ, ಈಶ್ವರ ಕಟೀಲ್ ಉಪಸ್ಥಿತರಿದ್ದರು



0 Comments