ಮೂಡುಬಿದಿರೆ ಚಾರುವಸಂತ ನಾಟಕ ಪ್ರದರ್ಶನ ಉದ್ಘಾಟನೆ
ಮೂಡುಬಿದಿರೆ: ಎಲ್ಲ ಧರ್ಮ, ಮತವನ್ನು ಗೌರವಿಸಬೇಕು. ದ್ವೇಷ, ಅಸೂಯೆ, ಈರ್ಷೆ ಬಿಟ್ಟು ಬಿಡಬೇಕು. ಪರಿಸರ ಸಂರಕ್ಷಿಸಬೇಕು. ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದ ಕುಟುಂಬದ ಬಿಂಬ 'ಚಾರು ವಸಂತ' ಎಂದು ಹಿರಿಯ ಸಂಶೋಧಕ ಹಾಗೂ ಕೃತಿಕಾರ ಡಾ. ಹಂ.ಪ.ನಾಗರಾಜಯ್ಯ (ಹಂಪನಾ )ಹೇಳಿದರು.
ಮೂಡುಬಿದಿರೆ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಭಾನುವಾರ ಪ್ರಸ್ತುತ ಪಡಿಸಿದ ತಮ್ಮ (ಡಾ.ಹಂ.ಪ.ನಾಗರಾಜಯ್ಯ) `ಚಾರುವಸಂತ' ನಾಟಕವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಕೃತಿಗಳು ಹೆಚ್ಚು ಮಾತನಾಡಬೇಕು. ವ್ಯಕ್ತಿಗಳಲ್ಲ.ಪರಿಸರ ರಕ್ಷಣೆಯ ಮಹತ್ವ ನಾಟಕದಲ್ಲಿದೆ. ಧರ್ಮ, ಜಾತಿ ಮುಖ್ಯವಲ್ಲ, ಸೌಹಾರ್ದತೆ ಮುಖ್ಯ. ಸುಖ- ದುಖ ಸಮಾನವಾಗಿ ಸ್ವೀಕರಿಸಿ ಎಂಬ ಸಂದೇಶ ನಾಟಕದಲ್ಲಿದೆ ಎಂದರು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, 2003ರಲ್ಲಿ ಹಂಪನಾ ಬರೆದ ಚಾರುವಸಂತವನ್ನು ಡಾ.ಎಂ.ಮೋಹನ ಆಳ್ವರ ಆಶಯದಂತೆ ನಿರ್ದೇಶಿಸಲಾಗಿದೆ. ರಂಗಕರ್ಮಿ ಡಾ. ನಾ.ದಾ. ಶೆಟ್ಟಿ ರಂಗರೂಪ ನೀಡಿದ್ದಾರೆ. ಸುಮಾರು ಎರಡು ವರ್ಷಗಳ ಈ ಪಯಣವು ಮೂಡುಬಿದಿರೆ ಮೂಲಕ ರಾಜ್ಯದಾದ್ಯಂತ ತಿರುಗಾಟ ನಡೆಸಲಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಉಪಸ್ಥಿತರಿದ್ದರು. ಉಪನ್ಯಾಸಕ ವೇಣುಗೋಪಾಲ ಕೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
--
ವಿವಿಧ ಜಿಲ್ಲೆಗಳಲ್ಲಿ ರಂಗಪಯಣ
ಚಾರುವಸAತ ನಾಟಕ ಅ.31 ರಂದು ಕಲಾಮಂದಿರ ಮೈಸೂರು, ನ.02 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ನ.04 ಡಾ.ಎಚ್.ಎನ್.ಕಲಾಮಂದಿರ ಗೌರಿಬಿದನೂರು, ನ.06 ಗುಬ್ಬಿ ವೀರಣ್ಣ ಕಲಾಮಂದಿರ ತುಮಕೂರು, ನ.08 ರಂದು ತ.ರಾ.ಸು. ರಂಗಮAದಿರ ಚಿತ್ರದುರ್ಗ, ನ.10 ರಂದು ಮಲ್ಲಿಕಾರ್ಜುನ ರಂಗಮAದಿರ ದಾವಣಗೆರೆ, ನ.12 ಡಾ.ಪಾಟೀಲ ಪುಟ್ಟಪ್ಪ ಸಭಾಭವನ ಧಾರವಾಡ ಹಾಗೂ ನ.15 ರಂದು ರಂಗಮನೆ ಸುಳ್ಯದಲ್ಲಿ ಪ್ರದರ್ಶನಗೊಳ್ಳಲಿದೆ.
0 Comments