ಪತ್ರಕರ್ತ ವೇಣುಗೋಪಾಲಗೆ ತಾಲೂಕು ಪತ್ರಕರ್ತರ ಸಂಘದಿಂದ ನುಡಿನಮನ
ಮೂಡುಬಿದಿರೆ: ಕಳೆದ ಮೂರು ದಿನಗಳ ಹಿಂದೆ ಅಕಾಲಿಕ
ಮರಣಕ್ಕೆ ತುತ್ತಾಗಿದ್ದ ಮೂಡುಬಿದಿರೆ ಪ್ರೆಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಅವರಿಗೆ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಅಧ್ಯಕ್ಷ ಯಶೋಧರ ವಿ.ಬಂಗೇರಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸಾಲ್ಯಾನ್ ಮಾತನಾಡಿ ಪತ್ರಿಕಾ ಭವನದ ನಿವೇಶನಕ್ಕಾಗಿ ಶ್ರಮಿಸಿರುವ ವೇಣುಗೋಪಾಲ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಪತ್ರಿಕಾಭವನದಲ್ಲಿ ಯಾವುದಾದರೊಂದು ಭಾಗಕ್ಕೆ ಹೆಸರನ್ನು ಇಡುವಂತೆ ಸಲಹೆ ನೀಡಿದರು.
ಸಂಘದ ಕೋಶಾಧಿಕಾರಿ ಗಣೇಶ್ ಕಾಮತ್ ಅವರು ಮಾತನಾಡಿ ಸಂಘದ ಸದಸ್ಯರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ತಪಾಸಣೆಯಂತಹ ಕಾರ್ಯಕ್ರಮ, ಕೋವಿಡ್ ಸಮಯದಲ್ಲಿ ತೋರಿರುವ ಕಾಳಜಿ ಬಗ್ಗೆಯ ನೆನಪು ಮಾಡಿಕೊಂಡ ಅವರು ಒತ್ತಡದ ಮಧ್ಯೆ ತಾಳ್ಮೆ, ನಮ್ಮ ನಮ್ಮ ಆರೋಗ್ಯದ ಬಗ್ಗೆ ಗಮನವಿರಲಿ ಎಂದರು.
ಧನಂಜಯ ಮೂಡುಬಿದಿರೆ ಅವರು ಮಾತನಾಡಿ ನೇರನುಡಿಯನ್ನು ಮೈಗೂಡಿಸಿಕೊಂಡಿದ್ದ ವೇಣುಗೋಪಾಲ್ ಅವರು ಕೆಲವೊಮ್ಮೆ ನಿಷ್ಠೂರವಾದಿಯಾಗಿದ್ದರೂ ಅದು ನಮ್ಮ ಸಂಘದ ವಿಷಯಕ್ಕೆ ಮಾತ್ರ. ಪ್ರತಿಕಾಭವನ ಕಟ್ಟಡ ನಿರ್ಮಾಣ ಆದಷ್ಟು ಬೇಗನೇ ಆಗಬೇಕೆಂಬುದರ ಬಗ್ಗೆ ಕನಸ್ಸನ್ನು ಕಂಡಿದ್ದ ಅವರ ಕನಸ್ಸನ್ನು ನಾವು ನನಸು ಮಾಡಬೇಕಾಗಿದೆ ಎಂದರು.
ಹಿರಿಯ ತುಳು ಸಾಹಿತಿ, ಉಡಲ್ ಪತ್ರಿಕೆಯ ಸಂಪಾದಕಿ ಜಯಂತಿ ಎಸ್.ಬಂಗೇರಾ ಅವರು ಮಾತನಾಡಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ವೇಣುಗೋಪಾಲ್ ಓರ್ವ ಸಹೋದರನಂತೆ ನನ್ನ ಜೊತೆಯಲ್ಲಿ ನಿಕಟ ಸಂಪರ್ಕದಲ್ಲಿದ್ದರು. ಪತ್ರಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದ ಅವರು ಉತ್ತಮ ಸಲಹೆಗಳನ್ನು ನೀಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಉಪಾಧ್ಯಕ್ಷ ಸೀತಾರಾಮ ಆಚಾರ್ಯ, ಪ್ರಸನ್ನ ಹೆಗ್ಡೆ, ಜೈಸನ್ ತಾಕೋಡೆ,
ರಾಘವೇಂದ್ರ ಶೆಟ್ಟಿ, ಶರತ್ ದೇವಾಡಿಗ, ಹರೀಶ್ ಕೆ.ಅದೂರು ಹಾಗೂ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಅವರು ನುಡಿನಮನ ಸಲ್ಲಿಸಿ ಪತ್ರಿಕಾಭವನದಲ್ಲಿ ವೇಣುಗೋಪಾಲ ಅವರ ಹೆಸರನ್ನು ಶಾಶ್ವತವಾಗಿ ಇರಿಸುವಲ್ಲಿ ಸಹಮತ ಸೂಚಿಸಿದರು.
0 Comments