ಮೂಡುಬಿದಿರೆ: ರಾಜ್ಯ- ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳದ್ದೇ ಕಾರುಬಾರು, ವಾಹನ ಚಾಲಕರಿಗೆ ತಲೆನೋವು
ಮೂ
ಡುಬಿದಿರೆ: ಮಂಗಳೂರು-ಮೂಡುಬಿದಿರೆ-ಕಾರ್ಕಳ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಡುಬಿದಿರೆ-ಬಂಟ್ವಾಳ-ಧರ್ಮಸ್ಥಳಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ತೆರೆದುಕೊಂಡಿದ್ದು ಚಾಲಕರು ವಾಹನಗಳನ್ನು ಚಲಾಯಿಸಿಕೊಂಡು ಹೋಗುವಾಗ ಹೊಂಡಗಳನ್ನು ತಪ್ಪಿಸಿಕೊಂಡು ಹೋಗುವುದು ಹೇಗೆಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ವಿದ್ಯಾಗಿರಿಯಿಂದ ಮೂಡುಬಿದಿರೆಗೆ ಬರುವ ದಾರಿಯಲ್ಲಿರುವ ಸಮಗಾರಗುಂಡಿ ಸೇತುವೆ ಬಳಿ ಗುಂಡಿಗಳು ಕಾಣಿಸಿಕೊಂಡಿವೆ. ದ್ವಿಚಕ್ರ ವಾಹನ ಚಾಲಕರು ಹೊಂಡಗಳಿಂದಾಗಿ ಎದುರಿನಲ್ಲಿ ಬರುವ ವಾಹನಗಳಿಗೆ ರಸ್ತೆಯಲ್ಲಿ ಜಾಗ ಬಿಟ್ಟು ಕೊಡುವ ಸಂದರ್ಭದಲ್ಲಿ ಅಲ್ಲೇ ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿಗೆ. ಈ ಪ್ರಮುಖ ದೇಶದಲ್ಲಿ ಈಗಾಗಲೇ ಹಲವಾರು ಮಂದಿ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇತುವೆಯು ಸ್ವಲ್ಪ ಓರೆಯಾಗಿರುವುದರಿಂದ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಗೋಚರಿಸದೆ, ಹೊಂಡಗಳ ಸಮೀಪ ಬಂದಾಗ, ಹೊಂಡಗಳನ್ನು ತಪ್ಪಿಸಲು ಹೋಗಿ ಎದುರಿನ ವಾಹನಕ್ಕೆ ಬಡಿದು ವಾಹನಗಳಿಗೂ ವಾಹನ ಚಾಲಕರಿಗೂ ಘಾಸಿಯಾಗುವ ಎಲ್ಲ ಸಂಭವವಿದೆ.
ಈ ರೀತಿಯ ಹೊಂಡಗಳು ಮೂಡುಬಿದಿರೆಯನ್ನು ಸಂಪರ್ಕಿಸುವ, ಐದಾರು ಕಡೆಗಳಿಂದ ಬರುವ ರಸ್ತೆಗಳಲ್ಲಿ ಸಾಮಾನ್ಯವಾಗಿ ಗೋಚರಿಸುತ್ತಲಿದೆ. ಕಡಲಕೆರೆ- ಅಲಂಗಾರು, ಅಲಂಗಾರು- ಜೈನಪೇಟೆ, ಶಿರ್ತಾಡಿ-ಮೂಡುಬಿದಿರೆ, ಮಹಾವೀರ ಕಾಲೇಜು -ಮೂಡುಬಿದಿರೆ, ಬಿರಾವು-ಮೂಡುಬಿದಿರೆ, ಇರುವೈಲು-ಮೂಡುಬಿದಿರೆ, ಕಿನ್ನಿಗೋಳಿ -ಮೂಡುಬಿದಿರೆ, ಪುತ್ತಿಗೆ -ನಾಗರಕಟ್ಟೆ-ಮೂಡುಬಿದಿರೆ ಈ ಎಲ್ಲ ಕಡೆ ರಸ್ತೆಗಳಲ್ಲಿ ಹೊಂಡಗಳು ಕಾಣಿಸಿಕೊಳ್ಳುತ್ತಿವೆ. ಈ ಬಾರಿ ಹೆಚ್ಚು ಮಳೆ ಸುರಿಯದೇ ಇದ್ದರೂ ಬಿದ್ದ ಒಂದಿಷ್ಟು ಮಳೆಗೇ ಹಲವು ಕಡೆ ಹೊಂಡಗಳು ಸೃಷ್ಠಿಯಾಗಿದೆ ಎಂದರೆ ಅಭಿವೃದ್ಧಿಯ ನೆಪದಲ್ಲಿ ಅವಸರದ ಕಾಮಗಾರಿ ಕಾರಣವಾಗಿದೆ ಎಂದರ್ಥ.
ಈ ರಸ್ತೆಗಳಲ್ಲಿ ಕೆಲವು ರಾಜ್ಯ, ರಾಷ್ಟ್ರೀಯ ಹೆದ್ದಾರಿ, ಪುರಸಭೆ, ಪಂಚಾಯತ್ ರಸ್ತೆಗಳಲ್ಲೂ ಡಾಂಬರು ಕಿತ್ತು ಬಂದು ಜಲ್ಲಿಕಲ್ಲುಗಳು ರಸ್ತೆಯಲ್ಲೇ ಹರಡಿಕೊಂಡಿರುವುದು ಕಾಣ ಸಿಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಪರಿವೀಕ್ಷಣೆ ಮಾಡಲೊಂದು ಗಸ್ತು ಪಡೆ ಇದೆ ಎಂಬುದನ್ನು ಹೆದ್ದಾರಿ ಗಸ್ತು ಪಡೆಯ ವಾಹನದ ಓಡಾಟ ರುಜುವಾತುಪಡಿಸುತ್ತ ಇದೆ. ಆದರೆ, ಈ ಹೊಂಡಗಳನ್ನು ಕಂಡರೆ, ಈ ಗಸ್ತುಪಡೆಗೆ ದ್ವಿಚಕ್ರವಾಹನದ ಸೌಲಭ್ಯವನ್ನು ಕಲ್ಪಿಸುವುದು ಉಚಿತ ಎಂದು ದ್ವಿಚಕ್ರ, ತ್ರಿಚಕ್ರವಾಹನಗಳ ಚಾಲಕರು ಅನಿಸಿಕೆ ವ್ಯಕ್ತಪಡಿಸುವುದರಲ್ಲಿ ಅರ್ಥ ಇದೆ ಎನ್ನಲಾಗುತ್ತಿದೆ. ಇದೇ ರೀತಿ ರಾಜ್ಯ ಹೆದ್ದಾರಿಗಳ ಸ್ಥಿತಿಗತಿ ನೋಡಿಕೊಳ್ಳುವ ಇನ್ನೊಂದು ಗಸ್ತುಪಡೆಯ ಅವಶ್ಯಕತೆಯೂ ಇದೆ ಅನ್ನಿಸುತ್ತಿದೆ.
* ಶೇ 75 ರಷ್ಟು ರಸ್ತೆಗಳು ಹಾಳಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಬಾರಿ ಮಳೆ ಕಡಿಮೆಯಾಗಿದ್ದರೂ ಕೂಡಾ ರಸ್ತೆಗಳು ಹೊಂಡಗಳಾಗಿ ಮಾರ್ಪಟ್ಟಿವೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಗಳು ತುರ್ತು ಕಾಮಗಾರಿಯ ಮೂಲಕ ತಾತ್ಕಾಲಿಕವಾಗಿಯಾದರೂ ಹೊಂಡಗಳನ್ನು ಮುಚ್ಚುವಂತಹ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಾಗರಿಕ ಹಿತ ರಕ್ಷಣಾ ವೇದಿಕೆಯ ಸುಧಾಕರ ಪೂಂಜಾ ಆಗ್ರಹಿಸಿದ್ದಾರೆ.
* ರಸ್ತೆಗಳಲ್ಲಿ ಹೊಂಡಗಳಿರುವುದರಿಂದ ಆಟೋ ರಿಕ್ಷಾಗಳನ್ನು ಓಡಿಸಲು ಕಷ್ಟಸಾಧ್ಯವಾಗಿದೆ. ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿಕೊಂಡು ಇರುವುದರಿಂದ ರಸ್ತೆ ಮತ್ತು ಹೊಂಡ ಯಾವುದೆಂದು ಗೊತ್ತಾಗದೆ ವಾಹನಗಳು ಹೊಂಡಕ್ಕೆ ಬೀಳುತ್ತಿದೆ. ರಿಕ್ಷಾದಲ್ಲಿ ಪ್ರಯಾಣಿಕರು ಇದ್ದಾಗ ರಿಕ್ಷಾ ಬಿದ್ದು ಪ್ರಾಣಾಪಾಯವಾದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಬನ್ನಡ್ಕ ಸಮೀಪದಲ್ಲಿ ಬಾಡಿಗೆ ಮಾಡುತ್ತಿರುವ ಆಟೋ ಚಾಲಕ ಲಕ್ಷ್ಮಣ್ ಪೂಜಾರಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಸಂಬಂಧಪಟ್ಟ ಇಲಾಖೆಗಳು ಆದಷ್ಟು ಬೇಗ ಹೊಂಡಗಳನ್ನು ಮುಚ್ಚಿ ಸುಲಭ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕಿದೆ.
0 Comments