ತಾ.ಪಂ.ಕಾರ್ಯನಿರ್ವಾಹಣಾಧಿಕಾರಿಯ ಅಮಾನತು ರದ್ದು
ಮೂಡುಬಿದಿರೆ: ಪ್ರೊಟೋಕಾಲನ್ನು ಪಾಲಿಸಿಲ್ಲ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವೈಲು ಗ್ರಾ. ಪಂಚಾಯತ್ ನ ಕಛೇರಿಯ ನೂತನ ಕಟ್ಟಡವನ್ನು ಉದ್ಘಾಟನೆಗೊಳಿಸಲು ತಯಾರು ಮಾಡಲಾಗಿದೆ ಎನ್ನುವ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹರ್ಣಾಧಿಕಾರಿ ದಯಾವತಿ ಅಮಾನತನ್ನು ಸರಕಾರವು ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಜೂನ್ 31ನೇ ತಾರೀಕಿಗೆ ಪೂರ್ವ ತಯಾರಿಯೊಂದಿಗೆ ಇರುವೈಲು ಪಂಚಾಯತ್ ನ ನೂತನ ಕಟ್ಟಡವನ್ನು ಉದ್ಘಾಟನೆಗೊಳಿಸುವುದೆಂದು ತೀರ್ಮಾನಿಸಿ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮ ಸಿದ್ಧತೆ ಪೂರ್ಣಗೊಂಡಿದ್ದರೂ ಪ್ರೊಟೊಕಾಲ್ ಕಾರಣದಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈ ನೆವದಲ್ಲಿ ಹಾಗೂ ರಾಜಕೀಯ ಮೇಲಾಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಮತ್ತು ತಾ.ಪಂ.ಇಒ ದಯಾವತಿಯವರ ತಲೆದಂಡವಾಗಿತ್ತು.
ಈ ನಡುವೆ ದಯಾವತಿ ಅವರು ಅಮಾನತು ಅರ್ಜಿಯನ್ನು ರದ್ದುಗೊಳಿಸುವಂತೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿರುವ ಸರಕಾರವು ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಕರ್ತವ್ಯವನ್ನು ಮಾಡುವಂತೆ ಎಚ್ಚರಿಕೆ ನೀಡಿ ಅಮಾನತನ್ನು ತೆರವುಗೊಳಿಸಲು ನಿರ್ಧರಿಸಿದೆ.
ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರ ಅಮಾನತನ್ನು ಈವರೆಗೆ ರದ್ದುಗೊಳಿಸಿಲ್ಲವೆಂದು ತಿಳಿದು ಬಂದಿದೆ.
0 Comments