ವಿದ್ಯಾರ್ಥಿಗೆ ಹಲ್ಲೆ : ಮೂವರ ಮೇಲೆ ಕೇಸ್
ಮೂಡುಬಿದಿರೆ: ಇಲ್ಲಿನ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಬಳಿ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮೂರು ಮಂದಿಯ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆಯ ಮೂವರು ಪ್ರಕರಣದ ಆರೋಪಿಗಳಾಗಿದ್ದು ಇನ್ನೂ ಕೆಲವು ಮಂದಿ ಇದ್ದಾರೆನ್ನಲಾಗಿದೆ.
ಸೋಮವಾರ ರಾತ್ರಿ ಮೂಡುಬಿದಿರೆಯ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದೆದುರು ತನ್ನೂರು ಬೆಂಗಳೂರಿಗೆ ಹೋಗಲು ಬಸ್ಸು ಕಾಯುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಆಕೆಯ ಸಹಪಾಠಿ, ಕೋಟೆಬಾಗಿಲು ನಿವಾಸಿ ವಿದ್ಯಾರ್ಥಿಯೋರ್ವ ಮಾತನಾಡಿಸಿದ್ದ. ಇಬ್ಬರೂ ಮೂಡುಬಿದಿರೆಯ ಒಂದೇ ಕಾಲೇಜಿನಲ್ಲಿ, ಒಂದೇ ತರಗತಿಯಲ್ಲಿ ಕಲಿಯುತ್ತಿದ್ದವರು. ಹಾಗಾಗಿ ಮಾತನಾಡಿಸಿದ್ದು ಬಸ್ಸು ಬಂದ ಬಳಿಕ ವಿದ್ಯಾರ್ಥಿನಿ ಬಸ್ ಹತ್ತಿ ಹೋಗಿದ್ದಳು. ಆದರೆ ಅಲ್ಲೇ ಇದ್ದ ಆರೋಪಿಗಳು ಮಾತನಾಡಿಸಿದ ವಿದ್ಯಾರ್ಥಿ ಮುಸ್ಲಿಂ ಎನ್ನುವ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಆ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದಿದ್ದರು.
ಸೋಮವಾರ ರಾತ್ರಿಯೇ ಕಾಂಗ್ರೆಸ್ ಮುಖಂಡರು ಠಾಣೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ನಿನ್ನೆ ರಾತ್ರಿಯೇ ಎಸಿಪಿ ಅವರು ಮೂಡುಬಿದಿರೆಗೆ ಬಂದು ಘಟನೆ ಬಗ್ಗೆ ವಿಚಾರಿಸಿದ್ದರೆನ್ನ ಲಾಗಿದೆ. ಇದೀಗ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
0 Comments