ಶಿಕ್ಷಕ ಸೀತಾರಾಮ ಶೆಟ್ಟರಿಗೆ ಶತ ಸಂಭ್ರಮ: ವಿದ್ಯಾರ್ಥಿಗಳು, ಅಭಿಮಾನಿ ಬಳಗ ಮತ್ತು ಸಮಾಜ ಮಂದಿರದಿಂದ ಅಭಿನಂದನೆ
ಮೂಡುಬಿದಿರೆ: ಶಿಸ್ತು, ಸಂಯಮ,ಸದೃಡ ಮನೋಭಾವ, ಬದ್ಧತೆ, ಆತ್ಮ ಸ್ತೈರ್ಯ ಮೊದಲಾದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಶಿಲೆಯನ್ನು ಶಿಲ್ಪವಾಗಿಸುವಲ್ಲಿ ಶಿಕ್ಷಕ ಶತಾಯುಷಿ ಸೀತಾರಾಮ ಶೆಟ್ಟರ ಪಾತ್ರ ಮಹತ್ವದ್ದು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.
ಅವರು ರವಿವಾರ ಸಮಾಜ ಮಂದಿರದಲ್ಲಿ ವಿದ್ಯಾರ್ಥಿಗಳು ಮತ್ತು ಅಭಿಮಾನಿ ಬಳಗ ಹಾಗೂ ಸಮಾಜ ಮಂದಿರ ಸಭಾ (ರಿ.) ವತಿಯಿಂದ ಜರಗಿದ ಸೀತಾರಾಮ ಶೆಟ್ಟಿ ಅವರ ಶತ ಸಂಭ್ರಮ ಆಚರಣೆಯಲ್ಲಿ ಸನ್ಮಾನಿಸಿ ಅಭಿನಂದನಾ ಮಾತುಗಳನ್ನಾಡಿದರು.
ಸಾಮಾಜಿಕ, ಆರ್ಥಿಕ ಚೈತನ್ಯವಿಲ್ಲದೇ ಮುದುಡಿ ಹೋಗಬೇಕಾದ ವಿದ್ಯಾರ್ಥಿಗಳ ಪ್ರತಿಭೆಗಳನ್ನೂ ಪೋಷಿಸಿ ರಾಷ್ಟ್ರ ಮಾನ್ಯತೆ ದೊರಕಿಸಿದ ಶಿಕ್ಷಕರ ಸಾಲಿನಲ್ಲಿ ತಮ್ಮ ಶಿಕ್ಷಕ, ಬಂಗಬೆಟ್ಟು ಗುತ್ತು ಶತಾಯುಷಿ ಸೀತಾರಾಮ ಶೆಟ್ಟಿಯವರು ಗಮನಾರ್ಹರು.
ಗುರುವನ್ನು ಗೌರವಿಸದವರನ್ನು ಸಮಾಜವೂ ಗುರುತಿಸುವುದಿಲ್ಲ ಈ ನಿಟ್ಟಿನಲ್ಲಿ ಶಿಕ್ಷಣ, ಜ್ಞಾನಕ್ಕಿಂತ ಸಂತೃಪ್ತಿಯ ಬದುಕು ಕಟ್ಟಿಕೊಳ್ಳುವ ವಿವೇಕ, ಕೀರ್ತಿಗಿಂತ ಬತ್ತದ ಒರತೆಯಂತೆ ನೀಡಿದ ಸ್ಫೂರ್ತಿ ತಮ್ಮೆಲ್ಲರ ಬದುಕನ್ನು ಬೆಳಗಿಸಿದೆ ಎಂದವರು ಹೇಳಿದರು.
ಸನ್ಮಾನ : ಗುರುಗಳ ಮೂಲಕ ರಜತ ದೀಪ ಬೆಳಗಿಸಿದ ಮೊಯಿಲಿಯವರು ಜರತಾರಿ ಶಾಲು, ಹಾರ, ಫಲಫುಷ್ಪ, ಸಮ್ಮಾನ ಪತ್ರ ಸಹಿತ ಪುಪ್ಪಾರ್ಚನೆಯೊಂದಿಗೆ ಸಮ್ಮಾನವನ್ನು ನೆರವೇರಿಸಿದರು. ಸಮ್ಮಾನಿತರನ್ನು ಆಶಯ ಗೀತೆಯ ಹಿನ್ನೆಲೆಯೊಂದಿಗೆ ಆರತಿ ಬೆಳಗಿ, ತಿಲಕವಿಟ್ಟು ರಜತಲೋಟದಲ್ಲಿ ಹಾಲು, ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು. ಬಂಗಬೆಟ್ಟು ಶಾಲಾ ಆಯ್ದ ವಿದ್ಯಾರ್ಥಿಗಳಿಗೆ ಶತ ಸಂಭ್ರಮದ ಸವಿನೆನಪಿಗಾಗಿ ಸೀತಾರಾಮ ಶೆಟ್ಟಿಯವರು ವಿದ್ಯಾರ್ಥಿ ವೇತನವನ್ನು ವಿತರಿಸಿದರು. ವಾಣಿ ಶೆಟ್ಟಿ ಪೂಮಾವರ ಗುತ್ತು ಕವನ ನಮನ ಸಲ್ಲಿಸಿದರು.
ಉದ್ಯಮಿ ಕೆ. ಶ್ರೀಪತಿ ಭಟ್ ಗುರುವಂದನೆ ಸಲ್ಲಿಸಿದರು. ಸಿಇಟಿ ಮೂಲಕ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಮಾಡಿದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಚಂದ್ರಯಾನ ಮಿಶನ್ನಲ್ಲೂ ಆಳ್ವಾಸ್ ವಿದ್ಯಾರ್ಥಿ ಸಾಧಕರನ್ನು ಮೋಹನ ಆಳ್ವರು ನೀಡಿರಬಹುದು. ಆದರೆ ಮೊಯಿಲಿ, ಆಳ್ವರ ಸಾಧನೆ ಬೆಳವಣಿಗೆಯ ಹಿಂದೆ ಗುರು ಸೀತಾರಾಮ ಶೆಟ್ಟರ ಕೊಡುಗೆಯಿದೆ. ಹಾಗಾಗಿ ಯಶಸ್ಸಿನ ಶ್ರೇಯಸ್ಸು ಅವರಿಗೂ ಸಲ್ಲುತ್ತದೆ ಎಂದು ಪತ್ರಿಕೋದ್ಯಮಿ ರಾಮಚಂದ್ರ ಮಿಜಾರು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹಲವು ಸಾಧಕರನ್ನು ಕಂಡ ಮಿಜಾರು ಆನಂದ ಆಳ್ವರ ಬಳಿಕ ಮತ್ತೋರ್ವ ಶತಾಯುಷಿಯನ್ನು ಕಾಣುತ್ತಿದೆ. ಮೂಲತಃ ಮಿಜಾರು ಕನಕಬೆಟ್ಟಿನ ಮೂಲದವನಾಗಿ ಇದು ತನಗೆ ಅಭಿಮಾನದ ವಿಷಯ. ಸೀತಾರಾಮ ಶೆಟ್ಟಿಯವರ ಶಿಷ್ಯ ರಾಜಕೀಯದ ಉತ್ತುಂಗಕ್ಕೆ ತಲುಪಿದ್ದು ಮಾತ್ರವಲ್ಲ ತನಗೂ ರಾಜಕೀಯದಲ್ಲಿ ಗುರುವಾಗಿ ಆದರ್ಶಗಳ ಪಾಠ ಕಲಿಸಿದವರು ಎಂದರು.
ಚೌಟರ ಅರಮನೆಯ ಕುಲದೀಪ್ ಎಂ. ಉಪಸ್ಥಿತರಿದ್ದರು.
ಮೂಡುಬಿದಿರೆ ತಾಲೂಕು ಕ.ಸಾ,ಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಹಿತೈಷಿಗಳು ಗುರುವಂದನೆ ಸಲ್ಲಿಸಿದರು. ಸಹಭೋಜನ, ಆತಿಥ್ಯದ ಜತೆಗೆ ಯಕ್ಷವೈಭವ ಸಾಂಸ್ಕೃತಿಕ ಕಾರ್ಯಕ್ರಮವೂ ಶತ ಸಂಭ್ರಮಕ್ಕೆ ರಂಗೇರಿಸಿತ್ತು.
0 Comments