ಪ್ರವೀಣ್ ನೆಟ್ಟಾರು ಹತ್ಯೆಗೆ ಒಂದು ವರ್ಷ:ಕುಟುಂಬಕ್ಕೆ ಸಹಕರಿಸುವಲ್ಲಿ ನಳಿನ್ ಕುಮಾರ್ ಯಶಸ್ವಿ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಇಂದಿಗೆ ಒಂದು ವರ್ಷಗಳಾಗಿದೆ. 2022ರ ಜುಲೈ 26ರಂದು ಬೆಳ್ಳಾರೆಯ ತನ್ನ ಕೋಳಿ ಅಂಗಡಿಯ ಮುಂಭಾಗದಲ್ಲಿ ಪ್ರವೀಣ್ ನೆಟ್ಟಾರನ್ನು ದುಷ್ಕರ್ಮಿಗಳ ತಂಡ ಹತ್ಯೆ ಮಾಡಿತ್ತು.
ಪ್ರವೀಣ್ ಹತ್ಯೆಯ ಬೆನ್ನಲ್ಲೇ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಪ್ರಭಾಕರ್ ಭಟ್ ರವರ ಮುಂದೆ ಪ್ರಕೋಪ ತೋರಿಸಿದ್ದರು. ಅಂದಿನ ಸರ್ಕಾರವೇ ಪ್ರವೀಣ್ ಮನೆಗೆ ಧಾವಿಸಿ ಬಂದಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರ ತವರು ಜಿಲ್ಲೆ ಆಗಿರುವ ಕಾರಣ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು. ಖುದ್ದು ನಳಿನ್ ಕುಮಾರ್ ಕಟೀಲು ರವರೇ ಪ್ರಕರಣವನ್ನು NIA ಗೆ ವಹಿಸಲು ಕೇಂದ್ರಕ್ಕೆ ಮನವಿ ಮಾಡಿದ್ದು ಕೇಂದ್ರ ಸರ್ಕಾರ ಕೂಡಲೇ NIAಯನ್ನು ಪುತ್ತೂರಿಗೆ ಕಳಿಸಿಕೊಟ್ಟಿತ್ತು. ನಿರಂತರವಾಗಿ ಕಾರ್ಯಾಚರಣೆ ನಡೆಸಿದ ತನಿಖಾ ಸಂಸ್ಥೆಯು ಪಿಎಫ್ಐ ದುಷ್ಕೃತ್ಯದ ಬೇರು ಸಮೇತ ಹೊರಗೆಳೆಯುವಲ್ಲಿ ಯಶಸ್ವಿಯಾಯಿತು.
ಈ ಮಧ್ಯೆ ಪ್ರವೀಣ್ ಕುಟುಂಬಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಸಂಪೂರ್ಣ ಸಹಕಾರವನ್ನು ನೀಡುತ್ತಾ ಬಂದರು. ಪ್ರವೀಣ್ ಕನಸಿನ ಮನೆಯನ್ನು ಸಂಸದ ನಳಿನ್ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟರು. ಕೇವಲ ಆರೇ ತಿಂಗಳಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡಲಾಯಿತು. ಪ್ರವೀಣ್ ಪತ್ನಿಗೆ ಸರ್ಕಾರಿ ಉದ್ಯೋಗವನ್ನು ನೀಡುವಲ್ಲಿಯೂ ನಳಿನ್ ಕುಮಾರ್ ನಿರಂತರವಾಗಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು ತಮ್ಮ ಕಛೇರಿಯಲ್ಲೇ ಉದ್ಯೋಗವನ್ನು ಒದಗಿಸಿದ್ದರು.
ಒಂದು ಕಡೆ ಪಕ್ಷದ ಹಾಗೂ ಸರ್ಕಾರದ ವತಿಯಿಂದ ಧನಸಹಾಯ, ಮತ್ತೊಂದು ಕಡೆ ಮನೆ ನಿರ್ಮಾಣ ಹಾಗೂ ಉದ್ಯೋಗ. ಹೀಗೆ ಹುತಾತ್ಮ ಹಿಂದೂ ಕಾರ್ಯಕರ್ತರ ಪೈಕಿ ಶೀಘ್ರ ಸ್ಪಂದನೆ ಪಡೆದ ಮೊದಲ ಹೆಸರು ಇದಾಗಿದೆ. ಎಲ್ಲಾ ರೀತಿಯ ಸಹಕಾರಕ್ಕೆ ಮನೆಯವರು ಸಂಸದರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
0 Comments