ಡಾ| ಮಂಜುನಾಥ ಭಂಡಾರಿ ಅವರಿಗೆ ಸಚಿವ ಸ್ಥಾನ ಲಭಿಸಲಿ
ಮೂಡುಬಿದಿರ,: ಕಾರ್ಯಕರ್ತರ ಜತೆ ಉತ್ತಮ ಸಂಪರ್ಕವನ್ನು ಹೊಂದಿರುವ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ವಿಧಾನಪರಿಷತ್ ಸದಸ್ಯರಾಗಿರುವ ಡಾ| ಮಂಜುನಾಥ ಭಂಡಾರಿ ಅವರಿಗೆ ರಾಜ್ಯ ಸರಕಾರದಲ್ಲಿ ಸಚಿವ ಸ್ಥಾನ ಲಭಿಸುವಂತಾಗಲಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಜುನಾಥ ಭಂಡಾರಿ ಅವರಿಗೆ ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಕುರಿತು ಒಳ್ಳೆಯ ಅನುಭವವಿದೆ. ಅವರನ್ನು ದ.ಕ. ಅಥವಾ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರಾದರೂ ಅವರು ಪಕ್ಷಸಂಘಟನೆಗೆ ಅಗತ್ಯ ಬೇಕಾದವರು. ಅವರಿಗೆ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕಾಗಿದೆ ಎಂದರು.
ಪುಚ್ಚಮೊಗರು ಅಣೆಕಟ್ಟಿನಲ್ಲಿ ಈ ಹಿಂದೆ ರಮಾನಾಥ ರೈ ಅವರ ಸೂಚನೆಯಂತೆ ಜಿಲ್ಲಾಡಳಿತ ಬೇಸಗೆ ಬರುವ ಮೊದಲು ನೀರು ಸಂಗ್ರಹಿಸಿಟ್ಟು ಬೇಸಗೆಯಲ್ಲಿ ಬಳಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ಈ ಬಾರಿ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತದಾರರು ಮುಂಜಾಗೃತೆ ವಹಿಸಲಿಲ್ಲ. ಮುಂದಿನ ಬಾರಿಯಾದರೂ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸ ಬೇಕಿದೆ ಎಂದವರು ಹೇಳಿದರು. ಪುರಸಭಾ ಮಾರುಕಟ್ಟೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪುರಸಭೆ ಮುಂದಾಗಬೇಕಾಗಿದೆ ಎಂದೂ ಅವರು ಆಶಿಸಿದರು. ಡಿಸಿಸಿ ಮಾಜಿ ಪ್ರ. ಕಾರ್ಯದರ್ಶಿ ಆಲ್ವಿನ್ ಡಿ'ಸೋಜಾ, ಕೌಶಿಕ್ ಡಿ. ಶೆಟ್ಟಿ ಬೆಳುವಾಯಿ ಉಪಸ್ಥಿತರಿದ್ದರು.
0 Comments