ಬಿದ್ ೯ದ ಕಂಬುಲ ಚಿತ್ರ ಮುಕ್ತಾಯದ ಹಂತದಲ್ಲಿ: ರಾಜೇಂದ್ರ ಸಿಂಗ್ ಬಾಬು
ಮೂಡುಬಿದಿರೆ : ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಮುಂದಿಟ್ಟುಕೊಂಡು ತಯಾರಾಗುತ್ತಿರುವ ಚಲನಚಿತ್ರ ತುಳುವಿನ ಬಿದ್ ೯ದ ಕಂಬುಲದ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.
ಅವರು ಮಂಗಳೂರಿನ ಉರ್ವ ಮೈದಾನದಲ್ಲಿ ಶುಕ್ರವಾರ ನಡೆಯುತ್ತಿದ್ದ ಬಿದ್ ೯ದ ಕಂಬುಲ ಚಿತ್ರೀಕರಣದ ಸಂದರ್ಭದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಸಿನೆಮಾವು ತುಳುನಾಡಿನ ಭಾಷೆ, ಸಂಸ್ಕೃತಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ತುಳು ಭಾಷೆ, ಇಲ್ಲಿನ ಸಂಸ್ಕೃತಿಯು ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಲಿದೆ. ಕನ್ನಡ,ತುಳು ಭಾಷೆ ಅಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಸಿನೆಮಾ ರಿಲೀಸ್ ಆಗಲಿದೆ ಅಲ್ಲದೆ ಇಂಗ್ಲೀಷ್ ಭಾಷೆಗೂ ಡಬ್ ಮಾಡುವ ಚಿಂತನೆ ಇದೆ.
ಸಿನೆಮಾದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಬಹಳಷ್ಟು ಇದೆ. ಈಗಾಗಲೇ 70 ದಿನಗಳ ಕಾಲ ಶೂಟಿಂಗ್ ನಡೆದಿದ್ದು ಏಪ್ರಿಲ್ ನಲ್ಲಿ ಸಿನೆಮಾ ರಿಲೀಸ್ ಆಗಲಿದೆ ಎಂದರು.
ತುಳುನಾಡಿನ ಹಲವಾರು ಪ್ರಸಿದ್ಧ ರಂಗ ಕಲಾವಿದರ ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್ ಮತ್ತು ರವಿಶಂಕರ್ ನಟಿಸಲಿದ್ದಾರೆ. ಕಾಂತಾರ ಸಿನೆಮಾದಲ್ಲಿ ಅಭಿನಯಿಸಿರುವ ಸ್ವರಾಜ್ ಶೆಟ್ಟಿ, ಕಂಬಳದ ಮಿಂಚಿನ ಓಟಗಾರ "ಕ್ರೀಡಾರತ್ನ" ಪುರಸ್ಕೃತ ಶ್ರೀನಿವಾಸ ಗೌಡ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. ಕುಸಲ್ದರಸೆ ನವೀನ್ ಡಿ" ಪಡೀಲ್ ಕೂಡಾ ಪಾತ್ರ ಮಾಡಿದ್ದಾರೆ. ಎಲ್ಲಾ ದೃಶ್ಯಗಳು ನೈಜತೆಯಿಂದ ಕೂಡಿದ್ದು ಸಹಜವಾಗಿಯೇ ಚಿತ್ರವನ್ನು ನಿರ್ಮಿಸಲಾಗಿದೆ ಎಂದರು.
ಚಿತ್ರದ ಸಂಭಾಷಣೆಕಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿ, ಈ ಚಿತ್ರದ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ತುಳು ಭಾಷೆಗೆ ಒಂದು ಹೊಸ ಆಯಾಮವನ್ನು ತಂದುಕೊಡಲಿದ್ದಾರೆ. ತುಂಬಾ ಭಿನ್ನ ಸಿನಿಮಾ ಎಲ್ಲರೂ ಪ್ರೋತ್ಸಾಹಿಸಿ" ಎಂದು ಹೇಳಿದರು.
ಮಾತು ಮುಂದುವರೆಸಿದ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನನ್ನ ಪಾತ್ರ ಕೂಡ ಡಿಫರೆಂಟ್ ಆಗಿದೆ. ನಮ್ಮ ತುಳುನಾಡಿನ ಜಾನಪದ ಸೊಗಡನ್ನು ವಿಶ್ವದೆಲ್ಲೆಡೆ ಪಸರಿಸಲಿದೆ. ಕಂಬಳ ಬರೀ ನಮ್ಮ ಸಂಸ್ಕೃತಿ ಮಾತ್ರವಲ್ಲ ಅದು ನಮ್ಮ ಬದುಕು" ಎಂದರು.
ಸ್ವರಾಜ್ ಶೆಟ್ಟಿ ಮಾತನಾಡಿ, "ಕಂಬಳ ಎನ್ನುವ ತುಳುನಾಡಿನ ಸಂಸ್ಕೃತಿ ಕುರಿತ ಸಿನಿಮಾ ಇದಾಗಿದೆ. ನನ್ನ ಪಾತ್ರ ಸಾಕಷ್ಟು ವಿಭಿನ್ನವಾಗಿದೆ. ಇಷ್ಟಪಟ್ಟು ನಟಿಸಿದ್ದೇನೆ, ತುಳುವರು ಪ್ರೀತಿಯಿಂದ ಬರಮಾಡಿಕೊಳ್ಳಿ" ಎಂದರು.
ಕಂಬಳ ಓಟಗಾರ ಶ್ರೀನಿವಾಸ ಗೌಡ ಮಾತನಾಡಿ ಕಂಬುಲ ಸಿನೆಮಾ ಮಾಡುವ ಮೊದಲೇ ಒಂದು ವರ್ಷಗಳ ಕಾಲ ಕಂಬಲದ ಬಗ್ಗೆ ಪೂರ್ಣವಾಗಿ ಈ ಟೀಮ್ ನವರು ಅರಿತುಕೊಂಡಿದ್ದಾರೆ. ಹಿಂದಿನ ಕಂಬಳ, ಈಗ ನಡೆಯುತ್ತಿರುವ ಕಂಬಳ, ಕಂಬಳದ ಒಳಗಿರುವ ಮರ್ಮವನ್ನೂ ಉತ್ತಮವಾಗಿ ಈ ಸಿನೆಮಾದಲ್ಲಿ ಮೂಡಿಸಿದ್ದಾರೆ. ಸಿನೆಮಾದಲ್ಲಿ ಅಭಿನಯಿಸಲು ಮೊದಮೊದಲು ಕಷ್ಟವಾಯಿತು. ನಂತರ ಹಿರಿಯರು ಮತ್ತು ಸ್ವರಾಜ್ ಶೆಟ್ಟಿಯವರು ಸಹಕಾರ ನೀಡಿರುವುದರಿಂದ ಅಭಿನಯಿಸಿದೆ. ಸಿನೆಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದರೆ ಮುಂದೆಯೂ ಅಭಿನಯಿಸುವೆ ಆದರೆ ಕಂಬಳವನ್ನು ಬಿಟ್ಟು ಅಲ್ಲ.ಕಂಬಳದಲ್ಲಿ ಕೋಣವನ್ನು ಓಡಿಸುವುದು ಇಷ್ಟ ಆದ್ದರಿಂದ ಮೊದಲ ಆದ್ಯತೆ ಕಂಬಳಕ್ಕೆ ಎಂದ ಅವರು ಉತ್ತಮವಾಗಿರುವ ಸಿನೆಮಾ ಬಿದ್ ೯ದ ಕಂಬಳಕ್ಕೆ ಎಲ್ಲರೂ ಪ್ರೋತ್ಸಾಹಿಸಿ ಎಂದರು.
ರಾಜೇಶ್ ಕುಡ್ಲ, ಕಲಾ ನಿರ್ದೇಶಕ ಚಂದ್ರಶೇಖರ ಸುವರ್ಣ ಇದ್ದರು.
0 Comments