ಮೂಡುಬಿದಿರೆಯ ಕಂಬಳಕ್ಕೆ ಕಾಂತಾರ ಚಿತ್ರತಂಡ ಆಗಮನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: 20ನೇ ವರುಷದ ಹೊನಲುಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ವಿಭಿನ್ನವಾಗಿ ಜನಾಕರ್ಷಣೆಯೊಂದಿಗೆ ನಡೆಸಲು ನಿರ್ಧರಿಸಲಾಗಿದ್ದು, ಡಿ.24ರಂದು ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುವ  ಕಂಬಳಕ್ಕೆ ಕಾಂತಾರ ಸಿನಿಮಾ ತಂಡ ಹಾಗೂ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಕರೆತರಲು ಪ್ರಯತ್ನ ನಡೆಸುತ್ತಿದ್ದೇವೆ. ವಿಶ್ವದ ವಿವಿಧ ರಾಷ್ಟ್ರಗಳ ಸಾವಿರಾರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಸ್ಕೌಟ್-ಗೈಡ್ಸ್ ಜಾಂಬೂರಿಗೆ ಬರುವುದರಿಂದ ಮೂಡುಬಿದಿರೆ ಕಂಬಳವನ್ನು ವೀಕ್ಷಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದರು.

ಒಂಟಿಕಟ್ಟೆ ಕಡಲಕೆರೆ ಬಳಿಯ ಸೃಷ್ಟಿ ಗಾರ್ಡನ್ ಸಭಾಂಗಣದಲ್ಲಿ ಮಂಗಳವಾರ ಸಾಯಂಕಾಲ ನಡೆದ ಮೂಡುಬಿದಿರೆ ಕಂಬಳ ಸಮಿತಿಯ ಸಮಾಲೋಚನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 

ಈ ಬಾರಿ ಕಂಬಳವು ಗೊಂದಲ ರಹಿತವಾಗಿ, ಶಿಸ್ತುಬದ್ಧವಾಗಿ  ನಡೆಯಲಿದೆ. ಸುವ್ಯವಸ್ಥಿತ ರೀತಿಯ ಪಾರ್ಕಿಂಗ್, ಗೊಂದಲಗಳಿಗೆ ಆಸ್ಪದವಿಲ್ಲದೆ, ಅತ್ಯಂತ ಜನಾಕರ್ಷಣೆಯ ಕೇಂದ್ರವಾಗಿ ಈ ಬಾರಿಯ ಕಂಬಳ ಮೂಡಿ ಬರುವುದರಲ್ಲಿ ಸಂದೇಹವೇ ಇಲ್ಲ ಎಂದರು. ಸಂಪೂರ್ಣಕಂಬಳ ಸಮಿತಿ, ಮೂಡುಬಿದಿರೆಯ ವಿವಿಧ ಗಣ್ಯರು, ಸಂಘಟನೆಗಳು, ಸಂಸ್ಥೆಗಳ ಸಹಕಾರದೊಂದಿಗೆ  ವ್ಯವಸ್ಥಿತ ರೀತಿಯಲ್ಲಿ ಮೂಡಿಬರಲಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಗುಣಪಾಲ್ ಕಡಂಬ ಮಾತನಾಡಿ, ಮೂಡುಬಿದಿರೆ ಕಂಬಳ ಸಮಿತಿಗೆ ಹಿಂದೆ ಹತ್ತು ಎಕರೆ ಜಾಗವಿತ್ತು. ಆದರೆ ಈಗ ೮.೫ ಎಕರೆ ಜಾಗ ಮಾತ್ರ ಕಂಬಳ ಸಮಿತಿಯಲ್ಲಿದೆ. ಉಳಿದ 1.5ಎಕರೆ ಜಾಗವನ್ನು ಪುನಃ ಸಮಿತಿಗೆ ಸೇರಿಸುವ ಪ್ರಯತ್ನಗಳಾಗಬೇಕಾಗಿದೆ. ಕಂಬಳ ಮ್ಯೂಸಿಯಂ ಸಹಿತ ಕಂಬಳಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ದಿ ಚಟುವಟಿಕೆಗಳು ಸಮಿತಿಯ ಮುಂದಿದೆ ಎಂದರು.

ಕೋಶಾಧಿಕಾರಿ ಭಾಸ್ಕರ್ ಎಸ್. ಕೋಟ್ಯಾನ್ ಮಾತನಾಡಿ, ಕೋಣಗಳನ್ನು ಕಟ್ಟಲು ಕರೆಯ ಬಳಿಯೇ ಸೂಕ್ತ ಜಾಗವನ್ನು ಕಾಯ್ದಿರಿಸಿದಲ್ಲಿ ಕೋಣಗಳನ್ನು ಬಿಡುವ ಸಂದರ್ಭದಲ್ಲಿ  ತಡವಾಗುವುದನ್ನು ತಪ್ಪಿಸಬಹುದು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ, ಶೂನ್ಯ ತ್ಯಾಜ್ಯ ಕಂಬಳ ನಡೆಸುವ ನಿಟ್ಟಿನಲ್ಲಿ ಕಂಬಳಾಭಿಮಾನಿಗಳ ಸಹಕಾರ ಅಗತ್ಯ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು, ಶೂನ್ಯ ತ್ಯಾಜ್ಯ ಕಂಬಳ ನಡೆಸಲು ವ್ಯಾಪಾರಿಗಳು ಸಾಥ್ ನೀಡುವ ಭರವಸೆ ಇದ್ದು, ಎಲ್ಲಾ ಕಂಬಳಾಭಿಮಾನಿಗಳು ಸಹಕರಿಸಬೇಕೆಂದರು.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ., ಸಮಿತಿಯ ಪ್ರಮುಖರಾದ ಸುನೀಲ್ ಆಳ್ವ, ಈಶ್ವರ್ ಕಟೀಲ್, ಕೆ.ಆರ್ ಪಂಡಿತ್, ಮೇಘನಾದ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ಕೆ.ಪಿ ಸುಚರಿತ ಶೆಟ್ಟಿ, ಧನಕೀರ್ತಿ ಬಲಿಪ ಉಪಸ್ಥಿತರಿದ್ದರು.

Post a Comment

0 Comments