ಮೂಡುಬಿದಿರೆ: ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಅಮಿಟೆಡ್ ಇದರ ಮೂಡುಬಿದಿರೆ ತಾಲೂಕು ಕಛೇರಿ ಉದ್ಘಾಟನೆ ಮತ್ತು ವಾರ್ಷಿಕ ಸಭೆ ಅಲಂಗಾರಿನಲ್ಲಿ ಸೋಮವಾರ ನಡೆಯಿತು.
ಪಿಂಗಾರ ತೋಟಗಾರಿಕಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ರಾಮ ಕಿಶೋರ್ ಮಂಚಿ ಮುಖ್ಯ ಅತಿಥಿಗಳ ಜತೆಗೂಡಿ ಕಛೇರಿಯನ್ನು ಉದ್ಘಾಟಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ರೈತಜನ್ಯದ ಮೊದಲ ಆಹಾರ ಉತ್ಪನ್ನ ಅಕ್ಕಿ ರೊಟ್ಟಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕೃಷಿ ಇಲಾಖೆಯ ಅಧಿಕಾರಿ ವಸಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವ್ಯವಸ್ಥೆಗಿಂತ ಪೂರ್ವದಲ್ಲಿ ರೈತರಿಗೆ ಬಹಳ ಮುಖ್ಯವಾಗಿ ಬೇಕಾದುದು ತಾಂತ್ರಿಕತೆ. ಭತ್ತ,
ಅಡಿಕೆ, ತೆಂಗು ಬೆಳೆಯಲ್ಲಿ ತಾಂತ್ರಿಕತೆಯನ್ನು ಬಳಸಿದರೆ ಮಾತ್ರ ಅತ್ಯುತ್ತಮ ಫಲವನ್ನುಪಡೆಯಲು ಸಾಧ್ಯ ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯ ಯುಗೇಂದ್ರ ಅವರು ರೈತರಿಗೆ ತರಕಾರಿ ಬೀಜವನ್ನು ವಿತರಿಸಿ ಮಾತನಾಡಿ ಈ ಕಂಪನಿಯು ಸರಕಾರದಿಂದ ನಿರ್ದೇಶಿಸಲ್ಪಟ್ಟ ಕಂಪನಿ ಆಗಿರುವಂತದ್ದು ಲಾಭ ಮಾಡುವ ಕಂಪನಿಯಲ್ಲ. ಇದು ರೈತರ ಶ್ರೇಯೋಭಿವೃದಿಗಾಗಿ ಇರುವ ಕಂಪನಿ. ಇದರಲ್ಲಿ ರೈತರು ಷೇರುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಜೇನು ಕೃಷಿಗೆ ಸಹಾಯಧನವನ್ನು ನೀಡುತ್ತಿದ್ದು, ಶೇ ೭೫ ರಷ್ಟು ಸಬ್ಸಿಡಿ ಇದ್ದು ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ರೈತ ಜನ್ಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಲಿಯೋ ವಾಲ್ಟರ್ ನಜರತ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ದ.ಕ. ಜಿಲ್ಲಾ ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಪ್ರವೀಣ್, ಬೈಫ್ ಸಂಸ್ಥೆಯ ಅಧಿಕಾರಿ ರಾಮಕೃಷ್ಣ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಪೂಜಾರಿ, ನಿರ್ದೇಶಕರುಗಳಾದ ದೀಪಕ್ ಕುಮಾರ್ ಕೊಳಕೆ, ಡೇವಿಡ್ ಡಿ'ಮೆಲ್ಲೋ, ಪ್ರತಿಭಾ ಜೆ.ಹೆಗ್ಡೆ, ವಾಮನ ಸಿ. ನಾಯ್ಕ, ಪಾಂಡು, ಗೋಪಾಲ ಪೂಜಾರಿ ಉಪಸ್ಥಿತರಿದ್ದರು.
ಜೆನೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ನಾಗರಾಜ ಅಂಬೂರಿ ವಂದಿಸಿದರು.
0 Comments