ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: 3.6ಕೋಟಿ ಲಾಭ, ಶೇ. 25 ಲಾಭಾಂಶ ವಿತರಣೆ- ಮಹಾಸಭೆಯಲ್ಲಿ ಹೊಸ ಯೋಜನೆಗಳ ಪ್ರಕಟಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ. ಇದರ 2021-2022ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಭಾಸ್ಕರ ಎಸ್.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಸೆ. 18ರಂದು ಕೆಸರ್‌ಗದ್ದೆ ಸುನಂದಾ ಮಾಧವ ಪ್ರಭು ಸಭಾಭವನದಲ್ಲಿ ಜರುಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಸ್ಕರ ಎಸ್. ಕೋಟ್ಯಾನ್ ಮಹಾಸಭೆಯಲ್ಲಿ ಪಾಲ್ಗೊಂಡು ಪರಸ್ಪರ ಚರ್ಚೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ಸಹಕಾರಿಯ ಬೆಳವಣಿಗೆಯಾಗುತ್ತದೆ. ನಮ್ಮ ಸಂಘದ ಬೆಳುವಾಯಿ ಸ್ವರ್ಣ ಸೌಧದಲ್ಲಿ ಹಿರಿಯ ಸದಸ್ಯರಿಗೆ ವ್ಯವಹಾರ ನಡೆಸಲು ಅನುಕೂಲವಾಗುವಂತೆ ನೆಲಅಂತಸ್ತಿನಲ್ಲಿ ಸರ್ವೀಸ್ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.

ಸಂಘವು 6736 ‘ಎ ತರಗತಿ, 7269 ‘ಕ ತರಗತಿ ಸದಸ್ಯರನ್ನು ಹೊಂದಿದ್ದು, 1.52ಕೋಟಿ ಪಾಲು ಬಂಡವಾಳ ಹೊಂದಿದೆ. 76.51ಕೋಟಿ ರೂ. ಠೇವಣಿ ಹೊಂದಿದ್ದು, 72.25 ಕೋಟಿ ಸಾಲ ವಿತರಿಸಿದೆ. 2021-22ನೇ ಸಾಲಿನಲ್ಲಿ ಶೇ. 100ರಷ್ಟು ಸುಸ್ತಿ ಸಾಲ ವಸೂಲಾತಿಯಾಗಿದೆ. ಸ್ವ-ಸಹಾಯ ಗುಂಪುಗಳಿಗೆ 89.34ಲಕ್ಷ ಸಾಲ ನೀಡಲಾಗಿದೆ. ಭದ್ರತಾ ಕೋಶ, ನೆಫ್ಟ್, ಆರ್‌ಟಿಜಿಎಸ್ ಸೇವಾ ಸೌಲಭ್ಯ, ಪಹಣಿ ಪತ್ರ, ಪಾನ್ ಕಾರ್ಡ್, ಜೆರಾಕ್ಸ್ ಸೌಲಭ್ಯ ಹೊಂದಿದೆ. ಸದಸ್ಯರಿಗೆ 50ಸಾವಿರ ರೂಪಾಯಿಗಳ ವೈಯಕ್ತಿಕ ಅಪಘಾತ ವಿಮಾ ಯೋಜನೆ, ಕೃಷಿ ಸಾಲ ಸದಸ್ಯರಿಗೆ ಮರುಪಾವತಿ ಮುಂಚಿತವಾಗಿ ಮೃತಪಟ್ಟಲ್ಲಿ ರೂ. 10ಸಾವಿರ ಕ್ಷೇಮಾಭಿವೃದ್ದಿ ನಿಧಿ, ರಸಗೊಬ್ಬರ ಹಾಗೂ ಸರಕು ಸಾಗಾಟ, ಅಪಘಾತ, ಶವಸಾಗಾಟದಂತಹ ತುರ್ತು ಕಾರ್ಯಗಳಿಗಾಗಿ ಕಡಿಮೆ ಬಾಡಿಗೆ ದರದಲ್ಲಿ ಟಾಟಾ ಯೋಧ ವಾಹನ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು.


2021-22ನೇ ಸಾಲಿನಲ್ಲಿ ಸಂಘವು 362ಕೋಟಿ ರೂ. ವ್ಯವಹಾರ ನಡೆಸಿ 3.6ಕೋಟಿ ನಿವ್ವಳ ಲಾಭ ಪಡೆದುಕೊಂಡಿದ್ದು, ಶೇ. 25 ಡಿವಿಡೆಂಟ್ ನೀಡಲಾಗಿದೆ. ಸಂಘವು ಕಳೆದ 12 ವರ್ಷಗಳಿಂದ ‘ಎ ದರ್ಜೆಯ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸನ್ಮಾನ: ಸಂಘದ ಸದಸ್ಯರಾದ ಬಾಬು ಶೆಟ್ಟಿ ಕೆಲ್ಲಪುತ್ತಿಗೆ, ರಾಘುಪೂಜಾರಿ ಪಡುಮಾರ್ನಾಡು, ಗೋಪಾಲರಾವ್ ದರೆಗುಡ್ಡೆ, ಆನಂದ ಆಚಾರ್ಯ ಮೂಡುಮಾರ್ನಾಡು, ಆಲ್ವಿನ್ ಕ್ವಾಡ್ರಸ್ ಕೆಸರ್‌ಗದ್ದೆ ಇವರನ್ನು ಕೃಷಿ ಕ್ಷೇತ್ರದಲ್ಲಿ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಬಿ. ಜಯರಾಜ್, ನಿರ್ದೇಶಕರಾದ ದಾಮೋದರ ಬಂಗೇರ, ಶ್ರೀಮತಿ ಅಂಬಿಕಾ ಶೆಟ್ಟಿ, ಶಂಕರ ಶೆಟ್ಟಿ, ಶ್ರೀನಾಥ್ ಸುವರ್ಣ, ಜೋನ್ ಎಫ್. ನಜ್ರತ್, ಸುಧಾಕರ ಶೆಟ್ಟಿ, ಪ್ರಭಾಕರ ಜಿ., ದ.ಕ.ಜಿ.ಕೇ.ಸ.ಬ್ಯಾಂಕಿನ ಪ್ರತಿನಿಧಿ ಸಂಜಯ್ ಅತಿಕಾರಿ ವೇದಿಕೆಯಲ್ಲಿದ್ದರು.

ಸದಸ್ಯರಾದ ಸುಭಾಶ್ಚಂದ್ರ ಚೌಟ, ಸೈಮನ್ ಮಸ್ಕರೇನ್ಹಸ್, ಸೋಮನಾಥ ಕೋಟ್ಯಾನ್, ಭಾಸ್ಕರ ಆಚಾರ್ಯ, ಸದಾಶಿವ ಶೆಟ್ಟಿ, ದಯಾನಂದ ಹೆಗ್ಡೆ, ಜಯಂತ್ ಕುಮಾರ್, ಚರ್ಚೆಯಲ್ಲಿ ಪಾಲ್ಗೊಂಡರು.

ವಸೂಲಾತಿ ಅಧಿಕಾರಿ ಕೆ. ಸುರೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಉಮೇಶ್ ಕೋಟ್ಯಾನ್ ವರದಿ ಮಂಡಿಸಿದರು. ಸಂತೋಷ್ ಶೆಟ್ಟಿ ನಿವ್ವಳ ಲಾಭದ ವಿಂಗಡನೆಯನ್ನು ಪ್ರಕಟಿಸಿದರು. ಪ್ರಭಾರ ಲೆಕ್ಕಾಧಿಕಾರಿ ಪ್ರತಿಮಾ ಸನ್ಮಾನಿತರನ್ನು ಪರಿಚಯಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಬಜೆಟ್ ಮಂಡಿಸಿದರು. ಶಾಖಾ ವ್ಯವಸ್ಥಾಪಕ ಸಂತೋಷ್ ಶೆಟ್ಟಿ ಧನ್ಯವಾದವಿತ್ತರು.

Post a Comment

0 Comments