ಮೂಡುಬಿದಿರೆ: ಸ್ವಾತಂತ್ರ್ಯ ಸಂಗ್ರಾಮದ ೨೨೫೦ವರುಷಗಳ ಇತಿಹಾಸವನ್ನು ಮುಚ್ಚಿಟ್ಟು ೬೩ವರ್ಷಗಳ ಕಾಂಗ್ರೆಸ್ಸಿನ, ೨೭ವರ್ಷಗಳ ಗಾಂಧೀಜಿ ನೇತೃತ್ವದ ಹೋರಾಟಕ್ಕೆ ಸೀಮಿತಗೊಳಿಸಲಾಗಿದೆ. ಇದೊಂದು ದೊಡ್ಡ ದ್ರೋಹವಾಗಿದೆ. ದೇಶ ವಿಭಜನೆಯ ಕರಾಳ ರಾತ್ರಿಯ ಭಯಾನಕತೆಯನ್ನು ಪ್ರತಿಯೊಬ್ಬರೂ ಅರಿಯಬೇಕು. ಜಗತ್ತು ಕಂಡು ಕೇಳರಿಯದ ನರಮೇಧ ರಕ್ತದೋಕುಳಿ ನಡೆದು ಮಾನ ಪ್ರಾಣಗಳ ಬಲಿದಾನವಾಗಿ ಪಡೆದ ಸ್ವಾತಂತ್ರ್ಯವನ್ನು ಮುಚ್ಚಿಟ್ಟು ಅಹಿಂಸೆಯ ಸ್ವಾತಂತ್ರ್ಯ ಎಂಬ ಹಸಿಸುಳ್ಳನ್ನು ಹೇಳುವ ಕಾಂಗ್ರೆಸ್ಸಿಗರ ಮುಠ್ಠಾಳತನವನ್ನು ಬಯಲಿಗೆಳೆಯುವ ಅವಶ್ಯಕತೆ ಇಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನಾ.ಸೀತಾರಾಮ್ ಅಕ್ರೋಶ ವ್ಯಕ್ತಪಡಿಸಿದರು.
ಅವರು ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದು ಜಾಗರಣ ವೇದಿಕೆ ವತಿಯಿಂದ ನಡೆದ ವಾಹನ ಜಾಥಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಮಾತೆಯ ಮಕ್ಕಳೆಲ್ಲರೂ ಹಿಂದೂಗಳು. ನಾವು ಹಿಂದೂಗಳು ಎಂಬುದನ್ನು ಮರೆಯುತ್ತಿದ್ದೇವೆ. ದೇಶದ ಅನ್ನಾಹಾರ ನೀರು ಕುಡಿದ ಪ್ರತಿಯೊಬ್ಬರೂ ಹಿಂದೂಗಳು ಎಂಬ ಕಲ್ಪನೆ ಮರೆಯಾಗುತ್ತಿದೆ ಎಂದವರು ಹೇಳಿದರು.
ಇಸ್ಲಾಂ ಹೆಸರಲ್ಲಿ ಭಾರತದ ಮೇಲೆ ಆಕ್ರಮಣ ಹಿಂದೆಯೂ ಆಗಿದೆ. ಇಂದೂ ಆಗುತ್ತಿದೆ. ನಮ್ಮೊಳಗಿರುವ ಭಿನ್ನಾಭಿಪ್ರಾಯಗಳೇ ಈ ಎಲ್ಲಾ ದುರಂತಗಳಿಗೆ ಕಾರಣವಾಗಿದೆ ಎಂದರು.
ಅನೇಕ ಭಾಗಗಳನ್ನು ಕಳೆದುಕೊಂಡು ಚಿಕ್ಕದಾಗಿದ್ದ ಭಾರತ ಮತ್ತೆ ೧೯೪೭ರ ಮಧ್ಯರಾತ್ರಿ ತ್ರಿಖಂಡಗಳಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ಘನಘೋರ ದುರಂತವನ್ನು ನೆನಪಿಸುವುದಲ್ಲದೆ,ಕಳೆದುಹೋದ ಭಾಗಗಳೆಲ್ಲವನ್ನು ಮತ್ತೆ ಒಂದುಗೂಡಿಸಿ ಅಖಂಡ ಪರಮವೈಭವ ಭಾರತದ ನಿರ್ಮಾಣದ ಸಂದೇಶ ಸಾರುವುದು ಅಖಂಡ ಭಾರತ ಸಂಕಲ್ಪ ದಿನದ ಮಹತ್ವವಾಗಿದೆ ಎಂದರು.
ಉದ್ಯಮಿ ವೇಣುಗೋಪಾಲ್ ಭಟ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಚೇತನ್ ಶೆಟ್ಟಿ,
ವಿಹಿಂಪ ಕಾರ್ಯದರ್ಶಿ ಶಾಂತಾರಾಮ ಕುಡ್ವ, ಹಿಂದೂ ಜಾಗರಣಾ ವೇದಿಕೆ ತಾಲೂಕು ಸಮಿತಿ ಅಧ್ಯಕ್ಷ ಸಮಿತ್ ರಜ್ ದರೆಗುಡ್ಡೆ, ತಾಲೂಕು ಸಂಯೋಜಕ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಪ್ರದೀಪ್ ಮಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
0 Comments