ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ವಿಶೇಷ ಉಪನ್ಯಾಸ `ಚಿಂತನ ಬೆಳಕು’ ಕಾರ್ಯಕ್ರಮ ಇಲ್ಲಿನ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುರಿತು ಮಾತನಾಡಿದ ಖ್ಯಾತ ಇತಿಹಾಸ ತಜ್ಞ ಡಾ. ಪುಂಡಿಕ್ಯಾ ಗಣಪಯ್ಯ ಭಟ್, `ದೇಶದ ಸ್ವಾತಂತ್ರ‍್ಯ ಹೋರಾಟಕ್ಕೆ ಸರಿಯಾದ ದಾರಿ ತೋರಿಸಿ, ಚಳುವಳಿಗೆ ನಿಜವಾದ ರೂಪ ನೀಡಿದವರು ಮಹಾತ್ಮ ಗಾಂಧಿಯವರು. ಅವರ ಹೋರಾಟ ಸತ್ಯ ಮತ್ತು ಅಹಿಂಸೆಯ ಕಡೆ ಇತ್ತು ಹೀಗಾಗಿ ದೇಶದ ಉದ್ದಗಲದಿಂದ ಜನರು ಚಳುವಳಿಯಲ್ಲಿ ಭಾಗಿಯಾದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾರಸ್ವತರು, ಗೌಡ ಸಾರಸ್ವತರು ಹಾಗೂ ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ್ದರು. ದೇಶಕ್ಕಾಗಿ ೨೦೦ಕ್ಕೂ ಹೆಚ್ಚಿನ ಮಹಿಳೆಯರು ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಕವಿ ಪಂಜೆ ಮಂಗೇಶರಾಯರ ಹಿರಿಯರು ಬಳಸಿದ ಊರುಗೋಲನ್ನು ಗಾಂಧೀಜಿ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಬಳಸಿದ್ದರು ಎನ್ನುವುದು ವಿಶೇಷವಾಗಿದೆ.
ವಕೀಲರಾದ ಕಾರ್ನಾಡು ಸದಾಶಿವ ರಾವ್ ಮೊದಲ ಬಾರಿಗೆ ಗಾಂಧಿಜೀವರಿಗೆ ಸ್ವಾತಂತ್ರ‍್ಯ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಪತ್ರ ಬರೆದು, ಈ ಭಾಗದಲ್ಲಿ ರಾಷ್ಷಟ್ರೀಯ ಪ್ರಜ್ಞೆಯನ್ನು ಹುಟ್ಟುಹಾಕಿದರು ಎಂದರು. ಸ್ವತಂತ್ರ ಭಾರತಕ್ಕೆ ನಮ್ಮ ಪೂರ್ವಜರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಆದರೆ ನಾವು ಇಂದು ಎಷ್ಟು ಅವರ ತ್ಯಾಗವನ್ನು ಸ್ಮರಿಸುತ್ತೇವೆ ಎಂಬುದನ್ನು ಆತ್ಮ ವಿಮರ್ಶೆಮಾಡಿಕೊಳ್ಳಬೇಕು. ಹಿಂದೆ ಬ್ರಿಟಿಷರು ಆಳ್ವಿಕೆ ನಡೆಸಿದ್ದ ಭಾರತೀಯ ಮೂಲದವರೇ ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿಯುವ ಹಂತದಲ್ಲಿರುವುದು ದೇಶದಲ್ಲಾದ ಬದಲಾವಣೆಯನ್ನು ಹೇಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಎಂ.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ, ಭಾಷಣಕಾರ ನೀತಿವಂತನಾಗಿರಬೇಕು. ಈ ರೀತಿಯ ವ್ಯಕ್ತಿತ್ವವುಳ್ಳವರ ಮಾತು ಮಾತ್ರ ಕೇಳುಗರು ಅನುಸರಿಸುತ್ತಾರೆ. ಅಂತಹ ನೀತಿವಂತರಲ್ಲಿ ಗಾಂಧೀಜಿಯೂ ಒಬ್ಬರು ಎಂದರು.
ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ವೇಣಗೋಪಾಲ ಶೆಟ್ಟಿ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಶಿರೂರು ವಂದಿಸಿದರು. ಉಪನ್ಯಾಸಕಿ ವಿಜಯಲಕ್ಷ್ಮೀ ನಿರೂಪಿಸಿದರು.
0 Comments