ಶನಿವಾರ ಮಂಗಳೂರಿನಲ್ಲಿ ಸಿ. ಎಫ್. ಐ. (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ವತಿಯಿಂದ ನಡೆಯಲಿದ್ದ ಜಾಥಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಬ್ರೇಕ್ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರದ ಜ್ಯೋತಿ ವೃತ್ತದಿಂದ ಪುರ ಭವನದವರೆಗೆ ಸಿ. ಎಫ್. ಐ ವತಿಯಿಂದ ಜಾಥಾ ನಡೆಯಲಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸಿ .ಎಫ್. ಐ ಹರಿಯಬಿಟ್ಟಿತ್ತು. ಆದರೆ ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಕೇವಲ ಪುರಭವನದಲ್ಲಿ ಕಾರ್ಯಕ್ರಮ ಮಾಡಲು ಮಾತ್ರ ಅವಕಾಶ ನೀಡಲಾಗಿದೆ, ಜಾಥಾ ನಡೆಸಲು ಅನುಮತಿ ನೀಡಿಲ್ಲ ಎಂಬ ವಿಷಯವನ್ನು ಸ್ಪಷ್ಟಪಡಿಸಿದ್ದರು. ಆದರೆ ಜಾಥಾ ನಡೆಸಿಯೇ ತೀರುತ್ತೇವೆ ಎಂಬ ಹಟಕ್ಕೆ ಬಿದ್ದ ಸಿ. ಎಫ್. ಐ ಕಾರ್ಯಕರ್ತರು ವೆನ್ಲಾಕ್ ಆಸ್ಪತ್ರೆಯ ಬಳಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಮೆರವಣಿಗೆ ನಡೆಸಲು ಸಿದ್ದರಾದ ಎಲ್ಲಾ ಮುಸ್ಲಿಂ ಹುಡುಗಿಯರನ್ನು ಬಸ್ ಹತ್ತಿಸಿ ಪುರಭವನಕ್ಕೆ ಕಳಿಸಿದ್ದು,ಇದರ ನೇತೃತ್ವ ವಹಿಸಿ ಕೊಂಡ ವಿದ್ಯಾರ್ಥಿ ನಾಯಕರನ್ನು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿನಿಯರ ದಿಕ್ಕು ತಪ್ಪಿಸಿ ಇಂತಹ ಕಾರ್ಯಕ್ರಮ ಮಾಡಿದರೆ ಸದ್ಯಕ್ಕೆ ನೀಡಲಾದ ಅನುಮತಿಯನ್ನೇ ರದ್ದುಪಡಿಸುವ ಎಚ್ಚರಿಕೆಯನ್ನು ಕಮಿಷನರ್ ನೀಡಿದರು.ಈ ಸಂದರ್ಭದಲ್ಲಿ ಒಂದಷ್ಟು ಪುಟ್ಟ ಮಕ್ಕಳು ಸಿ. ಎಫ್.ಐ ಧ್ವಜವನ್ನು ಹೊತ್ತುಕೊಂಡು ಬಂದದ್ದನ್ನು ಗಮನಿಸಿದ ಕಮಿಷನರ್ ಶಶಿಕುಮಾರ್ ಮಕ್ಕಳನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ನಾವು 3ನೇ ತರಗತಿಯವರು ಎಂಬ ಉತ್ತರವನ್ನು ನೀಡಿದಾಗ ಗರಂ ಆದ ಕಮಿಷನರ್ ಶಶಿಕುಮಾರ್ ಸಿ. ಎಫ್. ಐ ನಾಯಕರನ್ನು ಕುರಿತು, ಇಂತಹ ಮಕ್ಕಳನ್ನು ನೀವು ಈ ಕಾರ್ಯಕ್ರಮಕ್ಕೆ ಬಳಸುತ್ತಿರುವುದು ಖಂಡನೀಯ. ಕೂಡಲೇ ಆ ಮಕ್ಕಳನ್ನು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಪ್ಪಿಸುವಂತೆ ಸೂಚನೆ ನೀಡಿದರು.
0 Comments