ಮೂಡುಬಿದಿರೆ : "ಅತ್ಯಂತ ಬಡತನದಲ್ಲಿ ಜನಿಸಿದ ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆನು. ನನ್ನ ಪಾಲಿನ ಆಸ್ತಿ ಬರಡು ಭೂಮಿಯಾಗಿತ್ತು ಅದಕ್ಕೆ ನೀರಿನಾಸರೆಗಾಗಿ ಛಲಬಿಡದೆ ಪರಿಶ್ರಮದಿಂದ ಈ ಸುರಂಗ ಬಾವಿ ನಿರ್ಮಾಣ ಮಾಡಿದ್ದು ಈಗ ಸ್ವಾವಲಂಬಿಯಾಗಿ ಬದುಕುತ್ತಿದ್ದೇನೆ."ಎಂದು ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳು ಆಯೋಜಿಸಿದ್ದ "ವಿಶ್ವ ಪರಿಸರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ " ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಾವು ಬೆಳೆಯುವ ಕೃಷಿ ಹಾಗೆಯೇ ಯಾವುದೇ ಬೆಳೆಯಾದರೂ ಅದು ನಮಗೆ ಮಾತ್ರ ಎಂಬ ಸ್ವಾರ್ಥವಿರಬಾರದು.ಜೊತೆಗೆ ಪ್ರಾಣಿ ಪಕ್ಷಿಗಳೊಂದಿಗೆ ಹಂಚಿ ತಿನ್ನಬೇಕು ಹಾಗೂ ನಮಗೆ ವಿದ್ಯೆಯ ಜೊತೆ ಜೊತೆಗೆ ಪರಂಪರೆಯಿಂದ ಬಂದ ಕೃಷಿಯನ್ನು ಮರೆಯಬಾರದು ಎಂದು ಹೇಳಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ಪಿ ಎ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಪಾಲಾಕ್ಷಪ್ಪ ಮಾತನಾಡಿ ಮನುಷ್ಯ ಮನಸ್ಸು ಮಾಡಿದರೆ ಮರುಭೂಮಿಯನ್ನು ನಂದನವನವನ್ನಾಗಿ ಮಾಡಬಹುದು. ನಾವು ಪ್ರಕೃತಿಯನ್ನು ಪ್ರೀತಿಸಿದರೆ ಪ್ರಕೃತಿ ನಮ್ಮನ್ನು ಪ್ರೀತಿಸುತ್ತದೆ ಎಂದು ಅಭಿಪ್ರಾಯಪಟ್ಟರು."ಭೂ ತಾಪಮಾನ ಏರಿಕೆ ಮತ್ತು ವಾತಾವರಣದ ಬದಲಾವಣೆ" ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಆಧುನಿಕ ಜನರ ಜೀವನಶೈಲಿ ಪ್ರಕೃತಿಯ ಸಮತೋಲನವನ್ನು ಅಲುಗಾಡಿಸುತ್ತಿದೆ ಹಾಗಾಗಿ ಸರಳ ಜೀವನ ಪದ್ಧತಿಯನ್ನು ನಾವೆಲ್ಲರೂ ಅಳವಡಿಸಬೇಕಾದ ಅಗತ್ಯತೆ ಇದೆ ಎಂದರು.
ಕಾಲೇಜಿನ ಅಧ್ಯಕ್ಷ ಯುವರಾಜ್‌ಜೈನ್ ಅದ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಕೆ ಅಭಯಚಂದ್ರ ಜೈನ್, ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಕಾಲೇಜು ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಕಲಾಶಿಕ್ಷಕ ಭಾಸ್ಕರ್ ನೆಲ್ಯಾಡಿ ಅವರು ರಚಿಸಿದ ಪರಿಸರ ಗೀತೆಯನ್ನುಉಪನ್ಯಾಸಕ ಅಶೋಕ್ ಶೆಟ್ಟಿ ಅವರು ಸುಶ್ರಾವ್ಯವಾಗಿ ಹಾಡಿದರು.
ವಿದ್ಯಾರ್ಥಿಗಳಾದ ಹಿತಶ್ರೀ ಸ್ವಾಗತಿಸಿ, ಆದಿತ್ಯ ಅತಿಥಿಗಳನ್ನು ಪರಿಚಯಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಜಯಶೀಲ್ ಕಾರ್ಯಕ್ರಮ ನಿರೂಪಿಸಿ, ಆಶಿಕಾ ಧನ್ಯವಾದಗೈದರು.
0 Comments