ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಡೀಮ್ಡ್ , ರಿಸರ್ವ್ ಫಾರೆಸ್ಟ್ಗಳ ತೊಡಕಿನಿಂದ ಕಳೆದ ಕೆಲವು ವರ್ಷಗಳಿಂದ ಮನೆ ನಿವೇಶನಗಳಿಗೆ ತೊಂದರೆಯಾಗುತ್ತಿದೆ. ಏನಾದರೂ ಮಾಡಿ ನಿವೇಶನದ ಫಲಾನುಭವಿಗಳಿಗೆ ಮನೆ ಕಟ್ಟಲು ಬಿಡಿ ಎಂದು ಹೊಸಬೆಟ್ಟು ಗ್ರಾಮಸಭೆಯಲ್ಲಿ ಹಲವು ಸದಸ್ಯರು ವಿನಂತಿಸಿದ ಘಟನೆ ನಡೆದಿದೆ.
ಪುಚ್ಚಮೊಗರು ಶಾಂತಿರಾಜ ಕಾಲೋನಿ ಬಳಿಯ ಸ.ಉ.ಹಿ. ಪ್ರಾ.ಶಾಲೆಯಲ್ಲಿ ಹೊಸಬೆಟ್ಟು ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿನ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಉಪವಲಯಾರಣ್ಯಾಧಿಕಾರಿ ಅಶ್ವಿತ್‌ಗಟ್ಟಿ ಹಾಗೂ ಪಿಡಿಒ ಜ್ಯೋತಿ ಬಸರಗಿ ಅವರ ಮಧ್ಯೆ ಚರ್ಚೆ ನಡೆಯಿತು.
ಹೊಸಬೆಟ್ಟು ಗ್ರಾ.ಪಂ.ನಲ್ಲಿ ಅರಣ್ಯ ಇಲಾಖೆಯ ಗಮನಕ್ಕೆ ಬಾರದೆ ಪಂಚಾಯತ್‌ನವರು ಈ ಹಿಂದೆಯೇ ಮನೆ ನಿವೇಶನಕ್ಕೆ ಜಾಗ ಒದಗಿಸಲು ಸ.ಆಯುಕ್ತರಿಗೆ ಪ್ರಸ್ತಾವನೆ ಹೋಗಿ, ಅಲ್ಲಿಂದ ಮಂಜೂರಾಗಿ, ಫಲಾನುಭವಿಗಳಿಗೆ ಹಂಚಿಕೆಯೂ ಆದ ಬಳಿಕ ಅದರಲ್ಲಿ ಅರಣ್ಯ ಇಲಾಖೆಗೆ ಸೇರಿದ ರಿಸರ್ವ್, ಡೀಮ್ಡ್ ಫಾರೆಸ್ಟ್ ಜಾಗವೂ ಸೇರಿದ್ದು ಇಂಥಲ್ಲಿ ಭೂಮಿ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ . ಪ್ರಸ್ತಾವನೆ ಕಳಿಸುವ ಮುನ್ನ ಪಂಚಾಯತ್, ಅರಣ್ಯ, ಕಂದಾಯ , ಭೂಮಾಪನ ಇಲಾಖೆಯವರ ಸಮಕ್ಷಮ ಜಂಟಿ ಮೋಜಣಿ ನಡೆಸದೆ ಸಮಸ್ಯೆ ಉಂಟಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ ತಿಳಿಸಿದರು. ಪಂಚಾಯತ್ ಕಳಿಸಿದ ಪ್ರಸ್ತಾವನೆಯನ್ನು ಮೇಲಾಧಿಕಾರಿಗಳು ಪರಿಶೀಲನೆ ನಡೆಸಬೇಕಿತ್ತು, ಇದರಲ್ಲಿ ಪಂಚಾಯತ್‌ನ ತಪ್ಪಿಲ್ಲ ಎಂದು ಪಿಡಿಓ ವಾದಿಸಿದರು. ಆದರೆ ಹೀಗೆ ಇಂಥಲ್ಲಿ ಜಾಗ ಇದೆ ಎಂದು ಮೇಲಾಕಾರಿಗಳಿಗೆ ತಿಳಿಸುವ ಮುನ್ನ ಸ್ಥಳೀಯವಾಗಿ ಅರಣ್ಯ, ಕಂದಾಯ ಇಲಾಖೆ ಪರಿಶೀಲನೆ ನಡೆಸಬೇಕಿತ್ತು . ಖಾಲಿ ಇದೆ ಎಂದು ತೋರಿಸಲಾದ ಜಾಗದಲ್ಲಿದ್ದ ಡೀಮ್ಡ್ ಫಾರೆಸ್ಟ್ ಭಾಗವನ್ನು ಕಳೆದು ತೋರಿಸದೆ ಸಮಸ್ಯೆಯಾಗಿದೆ ಎಂದ ಅಶ್ವಿತ್ ಗಟ್ಟಿ ಈ ಬಗ್ಗೆ ಇರುವ ಕಾನೂನಿನ ತೊಡಕುಗಳನ್ನು ಸಭೆಯ ಮುಂದಿರಿಸಿದಾಗ, ನೀವು ಏನಾದರೂ ಮಾಡಿ ಆದರೆ ನಿವೇಶನದ ಫಲಾನುಭವಿಗಳಿಗೆ ಮನೆ ಕಟ್ಟಲು ಬಿಡಿ ಎಂದು ಸದಸ್ಯರು ಆಗ್ರಹಿಸಿದರು.
ಜಲಜೀವನ್ ಮಿಷನ್‌ನಿಂದ ನೀರು ಕೊಡುವಾಗ ರಿಟರ್ನ್ ವಾಲ್ವ್ ಹಾಕಲೇ ಬೇಕು ಎಂದು ಹೇಳುತ್ತಾರೆ. ಈ ರಿಟರ್ನ್ ವಾಲ್ವ್ ಹಾಕಿದರೆ ಒಂದಿಷ್ಟು ಕಸ ಬಂದರೂ ಪೈಪ್ ಬ್ಲಾಕ್ ಆಗಿಬಿಡುತ್ತದೆ ಎಂದು ಗ್ರಾಮಸ್ಥ ಮೈಕಲ್ ಅವರು ತಮ್ಮ ಅನುಭವದ ಮಾತು ಹೇಳಿದರು. ಪ್ರತಿಯೊಂದು ಮನೆಗೂ ಮೀಟರ್ ಹಾಕಬೇಕು ಎಂಬ ನಿಯಮಕ್ಕೂ ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು. ಯೋಗೀಶ ಶೆಟ್ಟಿ ಅವರು ಹಾಕುವುದಾದರೆ ಎಲ್ಲರಿಗೂ ಮೀಟರ್ ಹಾಕಿ ಇಲ್ಲವಾದರೆ ಯಾರಿಗೂ ಬೇಡ ಎಂದು ಆಗ್ರಹಿಸಿದರು. ಜಲಜೀವನ್ ಮಿಷನ್‌ನಿಂದ ನೀರು ಪೂರೈಕೆ ಕುರಿತಾದ ತರಬೇತಿಗೆ ಪಂಪ್ ಆಪರೇಟರ್‌ಗಳನ್ನು ಕಳಿಸುವ ಬದಲು ನಮ್ಮನ್ನು ಕಳಿಸಿದ್ದಾರೆ. ನಮಗೆ ಈ ವಾಲ್ವ್, ರಿಪೇರಿ ಇಂಥ ತಾಂತ್ರಿಕ ವಿಷಯಗಳು ಹೇಗೆ ಅರ್ಥ ಆಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅವಲತ್ತುಪಟ್ಟುಕೊಂಡರು. ಸರಕಾರದಿಂದ ಬಂದ ನಿಯಮಗಳಲ್ಲಿಯೇ ಹಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಹೊಸಬೆಟ್ಟು ಪಂಚಾಯತ್ ಮೂಡುಬಿದಿರೆ ಪಟ್ಟಣಕ್ಕೆ ಹೊಂದಿಕೊಂಡಿದೆ. `ಮೂಡುಬಿದಿರೆ ಯೋಜನಾ ಪ್ರಾಧಿಕಾರದ ನಿಯಮ ಇಲ್ಲಿಯೂ ಅನ್ವಯವಾಗುತ್ತದೆ. ಕೆಡವಿದ ಕಟ್ಟಡದ ಪಕ್ಕವೇ ರಸ್ತೆ ಸಾಗಿರುವುದರಿಂದ ರಸ್ತೆಯ ಮಾರ್ಜಿನ್ ಬಿಡದೆ ಕಟ್ಟಡ ಕಟ್ಟಲು ಮುಡಾ ಒಪ್ಪಿಗೆ ಕೊಡುತ್ತಿಲ್ಲ ಎಂದು ಮಾಜಿ ಸದಸ್ಯ ಮೈಕಲ್, ಹಾಲಿ ಸದಸ್ಯ ವಿಲ್ಪ್ರೆಡ್ ಮೆಂಡೋನ್ಸಾ ಮೊದಲಾದವರು ಕೇಳಿದ ಪ್ರಶ್ನೆಗೆ ಉತ್ತರ ಲಭಿಸಿತು.
ಪಂ. ವ್ಯಾಪ್ತಿಯ ಹೊಸಬೆಟ್ಟು ಮತ್ತು ಪುಚ್ಚಮೊಗರು ಗ್ರಾಮಗಳಲ್ಲಿ ಸುಮಾರು ಮೂರುವರೆ ಲಕ್ಷರೂ. ಬಿಲ್ಲು ಪಾವತಿಗೆ ಬಾಕಿಯಾಗಿದೆ, ಬಾಕಿ ಇರಿಸಿದವರು ದಯವಿಟ್ಟು ಕಟ್ಟಿ, ಇಲ್ಲವಾದರೆ ಕಷ್ಟವಾಗುತ್ತದೆ ಎಂದು ಉಪಾಧ್ಯಕ್ಷ ರೆಕ್ಸನ್ ಪಿಂಟೋ ಹೇಳಿದರು. ಅಂಗನವಾಡಿಗೆ ಜಾಗ ಸರ್ವೆ ಆಗಿದೆ, ೧೫ ದಿನಗಳಲ್ಲಿ ಪಹಣಿಪತ್ರ ಬರುತ್ತದೆ. ಆ ನಂತರ ಕಟ್ಟಡ ನಿರ್ಮಿಸೋಣ ಎಂದು ಅಂಗನವಾಡಿ ಮೇಲ್ವಿಚಾರಕಿ ಭಾರತಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರೀತಿ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆರೋಗ್ಯ ಇಲಾಖೆಯ ಕುಮಾರ್, ಶಿಕ್ಷಣ ಇಲಾಖೆಯ ನಿರ್ಮಲಾ, ಗ್ರಾಮಕರಣಿಕರಾದ ಭವ್ಯ, ಕಿಶೋರ ಕುಮಾರ, ಪಶುಸಂಗೋಪನ ಇಲಾಖೆಯ ಸುಭಾಷಚಂದ್ರ ಮೊದಲಾದವರು ಇಲಾಖಾ ಮಾಹಿತಿ ನೀಡಿದರು.
ಕಾರ್ಯದರ್ಶಿ ಸವಿತಾ ಕುಮಾರಿ ಎಂ.,ಉಪಸ್ಥಿತರಿದ್ದರು. ಸಿಬಂದಿ ಸಂಜೀವ ನಾಯ್ಕ್ ವರದಿ ಮಂಡಿಸಿದರು.
ಹೊಸಬೆಟ್ಟುಗೆ ನೀರು ಕೊಡದಿದ್ದರೆ ಮೂಡುಬಿದಿರೆ ಪುರಸಭೆಗೆ ಮುತ್ತಿಗೆ:
ಮೂಡುಬಿದಿರೆ ಪುರಸಭೆಗೆ ನಮ್ಮ ಪಂಚಾಯತ್ ಮೂಲಕ ಹರಿಯುವ ಫಲ್ಗುಣಿ ನದಿಯಿಂದ ನೀರು ಪೂರೈಕೆಯಾಗುತ್ತಿದೆ. ಹಾಗಾಗಿ ನಮಗೂ ಪುರಸಭೆಯವರು ನೀರು ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ಕೊಡದೇ ಇದ್ದರೆ ಮೂಡುಬಿದಿರೆ ಪುರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು ವಿಲ್ಪೆçಡ್ ಮೆಂಡೋನ್ಸ ಎಚ್ಚರಿಸಿದ್ದಾರೆ.
0 Comments