ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆ ತಾತ್ಕಾಲಿಕ ಪೌರಕಾರ್ಮಿಕರನ್ನು ನೇಮಿಸಲು ಪರಿಸರ ಅಭಿಯಂತರೆ ಸಲಹೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಬೇಡಿಕೆಯಿರಿಸಿ ಜು ೧ರಿಂದ ರಾಜ್ಯಾದಂತ ಪೌರಕಾರ್ಮಿಕರು ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದರಿಂದ  ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ನಮ್ಮಲ್ಲೂ ಸಮಸ್ಯೆಯಾಗಲಿದೆ ಆದ್ದರಿಂದ ಪ್ರತೀ ವಾರ್ಡ್ ಮಟ್ಟದಲ್ಲಿ ಪೌರಕಾರ್ಮಿಕ ವೃತ್ತಿ ಮಾಡುವವರನ್ನು ಗುರುತಿಸಿ ತಾತ್ಕಾಲಿಕವಾಗಿ ನೇಮಿಸಿದರೆ ಉತ್ತಮ ಎಂದು ಪರಿಸರ ಇಂಜಿನಿಯರ್ ಶಿಲ್ಪಾ ಸಲಹೆ ನೀಡಿದರು.

ಅವರು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಪುರಸಭಾ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು. ಇಲ್ಲಿ ಕಸವಿಲೇವಾರಿಯೇ ಸಮರ್ಪಕವಾಗಿ ನಡೆಯುತ್ತಿಲ್ಲ. ಹಳೆ ಪುರಸಭಾ ಕಟ್ಟಡದಲ್ಲೇ ಕಸದ ರಾಶಿ ಬಿದ್ದಿದೆ. ಕಸ ಸಂಗ್ರಹದ ವಾಹನಗಳೂ ದಿನಂಪ್ರತಿ ಕಸ ಸಂಗ್ರಹಿಸುತ್ತಿಲ್ಲ ಎಂದು ಕೊರಗಪ್ಪ ದೂರಿದರು. ಪೌರ ಕಾರ್ಮಿಕರ ಒಬ್ಬರ ಮನೆಯಲ್ಲಿ ಏನಾದರೂ ಖಾಸಗಿ ಕಾರ್ಯಕ್ರಮವಿದ್ದರೆ ಎಲ್ಲರೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುವುದರಿಂದ ಕೆಲವು ಸಲ ಕಸ ಸಂಗ್ರಹಣೆಯಲ್ಲಿ ಸಮಸ್ಯೆಯಾಗುತ್ತದೆ ಆದರೆ ಮತ್ತೆ ವಿಲೇವಾರಿ ಮಾಡುತ್ತಾರೆಂದು ಪರಿಸರ ಎಂಜಿನಿಯರ್ ತಿಳಿಸಿದರು. ಪೌರ ಕಾರ್ಮಿಕರು ಸಲ್ಲಿಸಿದ ಬೇಡಿಕೆಯನ್ನು ಈಡೇರಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು.


ಮೂಡುಬಿದಿರೆಯಲ್ಲಿ ಟ್ರಾಫಿಕ್ ಅವ್ಯವಸ್ಥೆಯಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಪಾದಾಚಾರಿಗಳಿಗೆ ರಸ್ತೆ ದಾಟಲು ಭಯಪಡುವಂತಾಗಿದೆ. ಹೀಗಾಗಿ ಆಯ್ದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಸದಸ್ಯರಾದ  ಸುರೇಶ್ ಕೋಟ್ಯಾನ್, ಇಕ್ಬಾಲ್ ಕರೀಂ ಒತ್ತಾಯಿಸಿದರು. ಜ್ಯೋತಿನಗರ, ರೋಟರಿ ಶಾಲೆ ಸಂಧಿಸುವ ಸ್ಥಳದಲ್ಲಿ ರಸ್ತೆ ದಾಟಲು ಸ್ಟೀಲ್ ಬ್ರಿಡ್ಜ್ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರವಿದ್ದರೂ ಕೆಲವು ಖಾಸಗಿ ಬಸ್ಸು ಮತ್ತು ಘನವಾಹನಗಳು ಏಕಮುಖ ರಸ್ತೆಯಲ್ಲೇ ಸಂಚರಿಸುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ರಾಜೇಶ್ ಮಲ್ಯ ಮತ್ತಿತರರು ಗಮನ ಸೆಳೆದರು.

ನಿಶ್ಮಿತಾ ಸರ್ಕಲ್, ಹಳೆ ಪೊಲೀಸ್ ಠಾಣೆ ಮತ್ತು ರೋಟರಿ ಶಾಲೆ ಬಳಿ ಪೊಲೀಸರನ್ನು ನೇಮಿಸುವಂತೆ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದಾಗಿ ಮುಖ್ಯಾಧಿಕಾರಿ ಇಂದು ಎಂ ಉತ್ತರಿಸಿದರು. 

ಮೂಡುಬಿದಿರೆ ಕೊಡ್ಯಡ್ಕ ರಸ್ತೆಯ ರಿಂಗ್ ರೋಡ್ ಸಂಧಿಸುವಲ್ಲಿ ಹಲವು ಅಪಘಾತಗಳು ನಡೆಯುತ್ತಿದ್ದು ಇಲ್ಲಿ ಹಂಪ್ ಅಳವಡಿಸಬೇಕೆಂದು ಸದಸ್ಯೆ ಸೌಮ್ಯ ಸಂದೀಪ್ ಶೆಟ್ಟಿ ತಿಳಿಸಿದರು.

ಪ್ಲಾಸ್ಟಿಕ್ ಮೂಲದಲ್ಲೇ ನಿಷೇಧಿಸಿ

ರಾಜ್ಯ ಸರ್ಕಾರವು ಜುಲೈ ೧ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದು ಮೂಡುಬಿದಿರೆಯಲ್ಲೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಪರಿಸರ ಅಭಿಯಂತರೆ ಶಿಲ್ಪಾ ಸಭೆಯ ಗಮನಕ್ಕೆ ತಂದರು.

ಇಲ್ಲಿ ವ್ಯಾಪಾರ ಮಳಿಗೆಗಳಿಗೆ ದಾಳಿ, ದಂಡ ವಿಧಿಸುವುದಕ್ಕಿಂತ ಪ್ಲಾಸ್ಟಿಕ್ ಉತ್ಪಾದನೆಯ ಮೂಲದಲ್ಲೇ ನಿಷೇಧಿಸಬೇಕು ಈ ಕುರಿತು ಸರ್ಕಾರದ ಗಮನಸೆಳೆಯಬೇಕು ಎಂದು ರಾಜೇಶ್ ಮಲ್ಯ ತಿಳಿಸಿದರು. ಪ್ಲಾಸ್ಟಿಕ್ ಮಾರಾಟ ಮಾಡುವ ಮಳಿಗೆಗಳ ವ್ಯಾಪಾರಸ್ಥರನ್ನು ಕರೆದು ಸಭೆ ನಡೆಸಿ ಮೊದಲೆ ತಿಳಿಸಿದರೆ ಉತ್ತಮ ಎಂದು  ಇಕ್ಬಾಲ್ ಕರೀಂ ಸಲಹೆ ನೀಡಿದರು.   


ಪುರಸಭಾ ವ್ಯಾಪ್ತಿಯ ಪೇಪರ್‌ಮಿಲ್‌ನಿಂದ ವಿದ್ಯಾಗಿರಿವರೆಗಿನ ರಿಂಗ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟವರ ಸ್ಥಳಕ್ಕೆ ಪುರಸಭೆ ವತಿಯಿಂದ ಬೇಲಿ ಹಾಕಿ ಕೊಡುವ ಕುರಿತು ಪರ ವಿರೋಧ ಚರ್ಚೆ ನಡೆಯಿತು. 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುರೇಶ್ ಕೋಟ್ಯಾನ್ ಈ ರಸ್ತೆಯು ಮುಂದೆ ಬನ್ನಡ್ಕದವರೆಗೆ ವಿಸ್ತರಣೆಗೊಳ್ಳಲಿರುವುದರಿಂದ ಹಲವಾರು ಮನೆಗಳಿಗೂ ತೊಂದರೆಯಾಗಲಿದೆ. ಅವರಿಗೂ ಪರಿಹಾರ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈ ಕುರಿತ ಸಾಧಕ ಬಾಧಕಗಳ ಸಮಗ್ರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಮಂಡಿಸುವುದಾಗಿ ಮುಖ್ಯಾಧಿಕಾರಿ ಇಂದು ಎಂ ಉತ್ತರಿಸಿದರು.

ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರು, ಇಂಜಿನಿಯರ್ ಪದ್ಮನಾಭ, ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments