ತೆಂಕಮಿಜಾರಿನಲ್ಲಿ ತಹಶೀಲ್ದಾರ್ "ಗ್ರಾಮ ವಾಸ್ತವ್ಯ"

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಸರಿಯಾದ ಮೂಲಭೂತ ಸೌಕರ್ಯವಿಲ್ಲದಿರುವ ಗುಡ್ಡ ಪ್ರದೇಶದಲ್ಲಿ ತಗಡುಶೀಟ್ ಹಾಕಿ ಮನೆ ಕಟ್ಟಿ ಕುಳಿತುಕೊಂಡಿರುವ ಕುಡುಬಿ ಜನಾಂಗದ ೬ ಕುಟುಂಬಗಳಿಗೆ ೧೬೪ ಸರ್ವೇ ನಂಬ್ರದಲ್ಲಿ ಮನೆಕಟ್ಟಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮ ಪಂಚಾಯತ್‌ಗೆ ತಹಶೀಲ್ದಾರ್ ಪುಟ್ಟರಾಜು ಸೂಚನೆ ನೀಡಿದ್ದಾರೆ.  

  ಅವರು ತೆಂಕಮಿಜಾರಿನಲ್ಲಿ ಶನಿವಾರ ನಡೆದ  "ಗ್ರಾಮ ವಾಸ್ತವ್ಯ" ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮಸ್ಥರಿಂದ ಸಮಸ್ಯೆಯನ್ನು ಆಲಿಸಿದಾಗ  ತೆಂಕಮಿಜಾರು ಗ್ರಾಮದ ಸಂತೆಕಟ್ಟೆಯಿಂದ ಸುಮಾರು ಎರಡೂವರೆ ಕಿ.ಮೀ ದೂರದ ಪಲ್ಕಿಟ್ಲ ಕೆರೆ ಬಳಿ ಗುಡ್ಡ ಪ್ರದೇಶದಲ್ಲಿ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದೆ, ಜನರು ಅನಾರೋಗ್ಯ ಹೊಂದಿದಾಗ ವಾಹನ ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ  ಸಮಸ್ಯೆಯಲ್ಲಿರುವ ಮನೆಗಳ ಬಗ್ಗೆ ಪಂಚಾಯತ್ ಸದಸ್ಯರು ತಹಶೀಲ್ದಾರ್ ಗಮನಕ್ಕೆ ತಂದಾಗ, ಆ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸೋಣವೆಂದು ಹೊರಟ ತಹಶೀಲ್ದಾರ್ ಅವರು ನಡೆದುಕೊಂಡೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

  ಆರು ಕುಟುಂಬಗಳು ಮನೆ ಕಟ್ಟಿ ಕುಳಿತುಕೊಂಡಿರುವ ಜಾಗವು ಪರಂಬೋಕು ಕೆರೆ ಜಾಗ ಮತ್ತು ಡೀಮ್ಡ್ ಫಾರೆಸ್ಟ್ಗೆ ಸೇರಿರುವುದರಿಂದ ಆ ಮನೆಗಳಿಗೆ ಹಕ್ಕುಪತ್ರವನ್ನು ನೀಡಲು ಸಾಧ್ಯವಿಲ್ಲ ಆದ್ದರಿಂದ ಆ ಆರು ಕುಟುಂಬಗಳಿಗೆ ೧೬೮ ಸರ್ವೆ ನಂಬರ್‌ನಲ್ಲಿ ಮನೆ ಕಟ್ಟಲು ಜಾಗ ನೀಡುವಂತೆ ಸೂಚಿಸಿದರು. ನಂತರ ತಾವು ಹಕ್ಕುಪತ್ರವನ್ನು ನೀಡುವುದಾಗಿ ತಿಳಿಸಿದರು. 

  ತಾನು ಮನೆ ನಿರ್ಮಿಸಲು  ಕಳೆದ ೧೫ ವರ್ಷಗಳ ಹಿಂದೆ ಪಂಚಾಂಗ ಹಾಕಿದ್ದು ಪಂಚಾಯತ್ ಯಾವುದೇ ರೀತಿಯಲ್ಲಿ ಸಹಕಾರ ನೀಡದಿರುವುದರಿಂದ ಮನೆ ಕಟ್ಟಲು ಸಾಧ್ಯವಾಗಿಲ್ಲ. ತನಗೆ ಮನೆಯಿಲ್ಲದೆ ತನ್ನ ಕುಟುಂಬವು ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯುತ್ತಿದೆ ಆದರೆ ಯಾರೂ ತನ್ನ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಅಮರನಗರದ ಗಿರಿಜಾ ಅವರು ತಹಶೀಲ್ದಾರ್ ಗಮನಕ್ಕೆ ತಂದಾಗ ಅಲ್ಲಿಗೂ ಭೇಟಿ ನೀಡಿದ ಪರಿಶೀಲನೆ ನಡೆಸಿದ ತಹಶೀಲ್ದಾರ್ ತೆಂಕಮಿಜಾರು ಗ್ರಾ.ಪಂನ  ಕಾರ್ಯವೈಖರಿಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು. ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಮನೆಗೆ ಪಂಚಾಂಗ ಹಾಕಿರುವುದರಿಂದ ಪಂಚಾಯತ್‌ನಿಂದ ಸಹಕಾರ ನೀಡಲು ಕಷ್ಟ ಸಾಧ್ಯವಾಗಿದೆ ಆದ್ದರಿಂದ  ೯೪ ಸಿಗೆ ಅರ್ಜಿ ನೀಡುವಂತೆ ಸೂಚಿಸಿದರು.  

   ನಂತರ ಗುಂಡೀರು ಕೊರಗರ ಕಾಲನಿಗೆ ಭೇಟಿದ ತಹಶೀಲ್ದಾರ್ ಅವರಿಗೆ ೩ ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಕೊರಗರ ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಂದು ಕೊರತೆಗಳ ಸಭೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕುಕ್ಕುದಕಟ್ಟೆ ಅಣ್ಣಪ್ಪ ನಗರದಲ್ಲಿರುವ ೮ ಕುಟುಂಬಗಳು ೯೪ಸಿಗೆ ಅರ್ಜಿ ಹಾಕಿದ್ದು ಅದರಲ್ಲಿ ೭ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಆಯ್ಕೆ ಮಾಡಲಾಗಿದೆ. ಒಂದು ಕುಟುಂಬವು ಪಂಚಾಯತ್ ನಿವೇಶನಕ್ಕೆ ಕಾಯ್ದಿರಿಸಿರುವ ಜಾಗದಲ್ಲಿ ಮನೆ ಕಟ್ಟಿ ಕುಳಿತುಕೊಂಡಿರುವುದರಿಂದ ತೊಂದರೆಯಾಗಿದೆ. ಅವರಿಗೆ ಪಂಚಾಯತ್ ಅನುಮತಿ ಕೊಟ್ಟರೆ ಹಕ್ಕುಪತ್ರವನ್ನು ನೀಡಲಾಗುವುದೆಂದು ತಿಳಿಸಿದರು. 


   ಇದಕ್ಕೂ ಮೊದಲು ಸಂತೆಕಟ್ಟೆಯ ಸಭಾಭವನದಲ್ಲಿ ನಡೆದ "ಗ್ರಾಮ ವಾಸ್ತವ್ಯ" ಸಭಾ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು ಅವರು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಶಾಲಾ ದಾಖಲಾತಿ, ಆಧಾರ್ ಹಾಗೂ ರೇಷನ್ ಕಾರ್ಡ್ನಲ್ಲಿ ಮಕ್ಕಳ ಒಂದೇ ರೀತಿಯ ಹೆಸರು ದಾಖಲಾಗುವಂತೆ ನೋಡಿಕೊಳ್ಳುವಂತೆ ತಿಳಿಸಿದರು. ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಕೃಷಿ ಇಲಾಖೆಯ ವೈ.ಎಸ್.ನಿಂಗನಗೌಡ್ರ, ಮೆಸ್ಕಾಂ ಇಲಾಖೆಯ ಕಿರಿಯ ಎಂಜಿನಿಯರ್ ಸುಭಾಷ್ ಆಚಾರಿ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ವಸಂತ್ ರಾಜ್ ಇಲಾಖಾ ಮಾಹಿತಿಯನ್ನು ನೀಡಿದರು. 

  ಪಂಚಾಯತ್ ಉಪಾಧ್ಯಕ್ಷೆ ಸಮಿತಾ, ಪಂಚಾಯತ್ ಸದಸ್ಯ ಬಿ.ಎಲ್.ದಿನೇಶ್  ರಾವ್, ನೇಮಿರಾಜ್, ಲಿಂಗಪ್ಪ ಗೌಡ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪಂಚಾಯತ್ ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. 


Post a Comment

0 Comments