ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ಪೂರ್ಣವಾಗುವವರೆಗೂ ಸಚಿವ ಈಶ್ವರಪ್ಪ ರಾಜೀನಾಮೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಸಂತೋಷ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖಾ ವರದಿ ಸರ್ಕಾರದ ಕೈಸೇರಲಿ, ಬಳಿಕ ಅವರ ರಾಜೀನಾಮೆ ಕುರಿತು ನಿರ್ಧಾರ ಮಾಡುತ್ತೇವೆ. ಪ್ರಾಥಮಿಕ ವರದಿ ಬರುವವರೆಗೂ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದೆ. ಸಂಪೂರ್ಣ ತನಿಖೆಯಾದ ಮೇಲೆ ಸತ್ಯ ಹೊರಬರಲಿದೆ, ನಿನ್ನೆ ತಡರಾತ್ರಿ ಮರಣೋತ್ತರ ಪರೀಕ್ಷೆ ವರದಿ ಬರಲಿದೆ. ಸರ್ಕಾರ ತನಿಖೆಯಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ತಮ್ಮ ಆಳ್ವಿಕೆ ಅವಧಿಯಲ್ಲಿ ಕಾಂಗ್ರೆಸ್ ಸಾಕಷ್ಟು ಅರಾಜಕತೆ ಸೃಷ್ಟಿಸಿತ್ತು, ಅದರಿಂದಲೇ ರಾಜ್ಯದ ಜನತೆ ಅವರನ್ನು ತಿರಸ್ಕರಿಸಿದರು. ಅವರಿಗೆ ನಮ್ಮ ಸರ್ಕಾರವನ್ನು ಆರೋಪಿಸುವ ನೈತಿಕ ಹಕ್ಕು ಇಲ್ಲ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಹಲವಾರು ಆರೋಪಗಳು, ಲಂಚ ಆರೋಪಗಳು ಬಂದಿದ್ದವು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿಯವರು ಆರೋಪಿಸಿದರು.
0 Comments