ದರೆಗುಡ್ಡೆ ಶ್ರೀ ಇಟಲ ಸೋಮನಾಥೇಶ್ವರ ದೇವಸ್ಥಾನದಲ್ಲಿ "ಮುಷ್ಠಿ ಕಾಣಿಕೆ" ಸಮರ್ಪಣೆವಿನಮ್ರತೆ ಮತ್ತು ಸರಳತೆಯ ಪ್ರಾಮಾಣಿಕ ಸೇವೆಗೆ ಭಗವಂತನ ಅನುಗ್ರಹ ಪ್ರಾಪ್ತಿ : ಹೇಮಾವತಿ.ವಿ.ಹೆಗ್ಗಡೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಮನುಷ್ಯನ ಬದುಕು ಹುಟ್ಟಿನಿಂದ ಸಾವಿನವರೆಗೂ ದೇವಸ್ಥಾನದ ಸುತ್ತ ತಿರುಗುತ್ತಿರುತ್ತದೆ. ಇದನ್ನು ಅರಿತಿರುವ  ಹಿರಿಯರು ಪ್ರತಿ ಗ್ರಾಮದಲ್ಲಿ ಪ್ರಕೃತಿಯ ಮಧ್ಯೆ ದೇವಸ್ಥಾನವನ್ನು ಕಟ್ಟಿ ಬೆಳಗಿದರು. `ದೇವರ ಎದುರು ಯಾರು ದೊಡ್ಡವರಲ್ಲ, ಸಣ್ಣವರೂ ಅಲ್ಲ. ವೈಯುಕ್ತಿಕ ಹಿತಾಸಕ್ತಿ ಬದಿಗಿಟ್ಟು ವಿನಮ್ರತೆ ಮತ್ತು ಸರಳತೆಯೊಂದಿಗೆ ಪ್ರಾಮಾಣಿಕ ಸೇವೆಯನ್ನು ಮಾಡಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ ಹೇಳಿದರು.

ಅವರು ದರೆಗುಡ್ಡೆಯ ಇಟಲ ಶ್ರೀ ಸೋಮನಾಧೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಭಾನುವಾರ ಕ್ಷೇತ್ರದಲ್ಲಿ ಮುಷ್ಠಿಕಾಣಿಕೆ ಸಮರ್ಪಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಸ್ಥಾನಗಳಲ್ಲಿ ಹಿರಿಯರು ಜಾತ್ರೆ, ಉತ್ಸವ, ಅದಕ್ಕೆ ಬೇಕಾದ ಜಾಗ, ಆಸ್ತಿಯನ್ನು ಮಾಡಿಟ್ಟಿದ್ದರಲ್ಲದೆ ಎಲ್ಲಾ ವರ್ಗದ ಜನರನ್ನು ಗುತ್ತು ಬರ್ಕೆಯವರನ್ನು ಸೇರಿಸಿಕೊಳ್ಳುತ್ತಿದ್ದರು. ಸೋಮನಾಥ ದೇವರ ಕಾರಣಿಕದ ಬಗ್ಗೆ ಹೇಳುವುದಾದರೆ `ಮಾತು ಬಿಡ ಮಂಜುನಾಥ ಇದ್ದಂತೆ `ಸತ್ಯ ಬಿಡ ಸೋಮನಾಥ ಎನ್ನುವ ಮಾತು ಇದೆ. ಮಾತಿಗೂ ಸತ್ಯಕ್ಕೂ ಹೆಚ್ಚೇನು ವ್ಯತ್ಯಾಸವಿಲ್ಲ. ನಮ್ಮ ಮಾತಿನಲ್ಲಿ ಸತ್ಯ ಇರಬೇಕೆಂಬುದೆ ಇದರ ಅರ್ಥ ಎಂದರು. ಇಲ್ಲಿನ ಪ್ರಕೃತಿ ವೈಶಿಷ್ಟö್ಯವನ್ನು ಉಳಿಸಿಕೊಂಡು ಸೋಮನಾಥನ ಸಾನಿಧ್ಯ ಅಭಿವೃದ್ಧಿಗೆ ಊರಿನ ಎಲ್ಲರು ಶ್ರದ್ಧೆ ಮತ್ತು ಭಕ್ತಿಯಿಂದ ಕೆಲಸ ಮಾಡುವ ಸಂಕಲ್ಪ ತೊಡಬೇಕು  ಎಂದರು. 


 ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಜಲಧಾರೆಯ ಮಧ್ಯೆ ನೆಲೆನಿಂತ ಇಲ್ಲಿನ ಸೋಮನಾಥೇಶ್ವರ ದೇವಾಲಯಕ್ಕೆ ಪುರಾತನ ಇತಿಹಾಸ ಇದೆ. ೯ ಮಾಗಣೆಯ ಪ್ರತಿಯೊಂದು ಮನೆಯವರು ಸೇರಿ ಈ ಕ್ಷೇತ್ರದ ಜೀರ್ಣೋದ್ಧಾರದಲ್ಲಿ ಕೈಜೋಡಿಸಬೇಕು. ಪ್ರತಿಯೊಬ್ಬರು ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಅಭಿವೃದ್ಧಿಗಾಗಿ ಸಮರ್ಪಣೆ ಮಾಡಬೇಕು.  ಎಲ್ಲಾ ರಾಜಕೀಯ ಪಕ್ಷದವರು ದೇವಸ್ಥಾನದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ. ಆದರೆ ಇಲ್ಲಿಗೆ ರಾಜಕೀಯ ತರಬೇಡಿ ಎಂದು ಸ್ವಾಮೀಜಿ ಸಲಹೆಯಿತ್ತರು.

ಶಾಸಕ ಉಮಾನಾಥ ಕೋಟ್ಯಾನ್ ಮುಷ್ಠಿಕಾಣಿಕೆ ಸಮರ್ಪಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಪಣಪಿಲ ಅರಮನೆಯ ಅನುವಂಶೀಯ ಆಡಳಿತ ಮೊಕ್ತೇಸರ ಬಿ.ವಿಮಲ್ ಕುಮಾರ್ ಶೆಟ್ಟಿ, ನರಸಿಂಹ ತಂತ್ರಿ, ಹೋಟೆಲ್ ಉದ್ಯಮಿ ತಿಮ್ಮಯ್ಯ ಶೆಟ್ಟಿ, ಬಿಜೆಪಿ ಮುಖಂಡ ಈಶ್ವರ್ ಕಟೀಲು, ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಕೆ.ಕೆ. ಪೂಜಾರಿ ಅಳಿಯೂರು ಉಪಸ್ಥಿತರಿದ್ದರು.

ಸಮಿತಿ ಕರ‍್ಯಾಧ್ಯಕ್ಷ ಸುಖೇಶ್ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಮಜಲೋಡಿ ಗುತ್ತು ಪ್ರಮೋದ್ ಅರಿಗ ವಂದಿಸಿದರು. 


 

Post a Comment

0 Comments