ಮೂಡುಬಿದಿರೆ: ಚರ್ಚ್ ಪಾಲನಾ ಪರಿಷದ್, ಮೂಡುಬಿದಿರೆ ವಲಯ ಕಥೋಲಿಕ್ ಸಭಾ, ಮೂಡುಬಿದಿರೆ ವಲಯ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಪ್ರತಿಭಟನೆ ತಾಲೂಕು ಕಛೇರಿ ಬಳಿ ಬುಧವಾರ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಹಿಂದೂ, ಮುಸಲ್ಮಾನ, ಕ್ರೈಸ್ತರು ಸೇರಿ ಬ್ರಿಟಿಷರನ್ನು ಹಿಮ್ಮೆಟಿಸಿದರೇ ಹೊರತು, ಕ್ರೈಸ್ತರು ಬ್ರಿಟಿಷರನ್ನು ಅವ ನನ್ನ ಪಂಥ ಎಂದು ಹೇಳಿಕೊಳ್ಳಲಿಲ್ಲ. ಭಾರತದ ಸಕಲ ಜನಸಮೂಹ ಸೇರಿ ಭಾರತೀಯರಾಗಿದ್ದೇವೆ. ಅಂತಹದರಲ್ಲಿ ಭಾರತೀಯರದ್ದೇ ಒಂದು ಸರಕಾರ ಜಾರಿಗೆ ತಂದ ಕಾಯಿದೆ ಅದು ಮನುಷ್ಯ ವಿರೋಧಿ ಕಾಯಿದೆ ಅನ್ನೋ ಕಾರಣಕ್ಕೆ ಈ ಪ್ರತಿಭಟನೆಯ ಉದ್ದೇಶ. ಕ್ರೈಸ್ತ ಪಂಥವು ಮತಾಂತರ ಮಾಡಿದ್ದರೆ ಶಾಲಾ ಕಾಲೇಜುಗಳು ಮಾತ್ರವಲ್ಲ ಆಸ್ಪತ್ರೆಯ ರೋಗಿಗಳೂ ಮತಾಂತರಗೊಳ್ಳಬೇಕಿತ್ತು. ಆದರೆ ಸಮಾಜಕ್ಕೆ ಯಾವುದೇ ರೀತಿಯ ತೊಂದರೆಗಳನ್ನು ಮಾಡದೆ ಶಿಕ್ಷಣ, ಆರೋಗ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಮೂಡುಬಿದಿರೆ ಮುಖ್ಯ ಧರ್ಮಗುರು ರೆ/ ಫಾದರ್ ಪೌಲ್ ಸಿಕ್ವೇರ ಮಾತನಾಡಿ, ಕ್ರೈಸ್ತರು ಈ ದೇಶದ ವಿಶ್ವಾಸನೀಯ ಬಲಿಷ್ಠ ನಾಗರಿಕರು. ಪ್ರತಿಭಟನೆ ಎಂಬುದು ಪ್ರಜಾಪ್ರಭುತ್ವದ ಉಸಿರು. ಇಲ್ಲಿಯವರೆಗೂ ಕಾನೂನನ್ನು ಅರ್ಥೈಸಿಕೊಂಡು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದೇವೆ. ಜನಸಂಖ್ಯಾ ಪ್ರಮಾಣವನ್ನು ಹೆಚ್ಚಿಸುವಾ ಯಾವುದೇ ಕಾರ್ಯಸೂಚಿಗಳೂ ಕ್ರೈಸ್ತರಲ್ಲಿ ಇಲ್ಲ. ಇಂಥಹ ಸಮಯದಲ್ಲಿ ನಮ್ಮ ಸುತ್ತಮುತ್ತಲಿನ ಜನ ಸಮುದಾಯ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ವಿಶೇಷವಾಗಿ ಆರೋಗ್ಯ, ಶಿಕ್ಷಣ, ಇನ್ನಿತರ ಸೇವೆಗಳಿಂದ ವಂಚಿತರಾಗಿದ್ದಾರೆ. ಅವರನ್ನು ತೊಳಲಾಟವನ್ನು ನೋಡಲು ಧರ್ಮದ ಮೌಲ್ಯಗಳು ಬಿಡುತ್ತಿಲ್ಲ. ಅಜ್ಞಾನಿಗಳಿಗೆ ಜ್ಞಾನವನ್ನು, ಹಸಿದವರಿಗೆ ಅನ್ನ, ರೋಗಿಗಳಿಗೆ ಆರೋಗ್ಯ ನೀಡುವುದು ಕ್ರೈಸ್ತ ಧರ್ಮದ ಒಂದು ಬಹುಮುಖ್ಯ ಆದೇಶವಾಗಿದೆ ಈ ಕಾಯಿದೆಯನ್ನು ವಿರೋಧಿಸಲು ಮುಂದೆ ಬಂದಿಲ್ಲ. ನಮ್ಮ ಕೆಲಸಗಳನ್ನು ಬೆಂಬಲಿಸುದೇ ಆದರೆ ಮತಾಂತರ ಕಾಯಿದೆಯನ್ನು ಒಕ್ಕೊರೊಳಿನಿಂದ ಬೆಂಬಲಿಸಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರದ ಪುಟ್ಟರಾಜು ಅವರಿಗೂ ಈ ಮೂಲಕ ಮನವಿ ಸಲ್ಲಿಸಲಾಯಿತು.
ಉಡುಪಿ ಪ್ರಾಂತ್ಯ ಧರ್ಮಗುರು ಫಾ| ಚೇತನ್ ಲೋಬೋ, ಕ್ರೈಸ್ತ ಫೆಡರೇಶನ್ ಅಧ್ಯಕ್ಷ ಪ್ರಶಾಂತ್ ಜತ್ತನ, ಕಥೊಲಿಕ್ ಸಭಾ ವಲಯದ ಅದ್ಯಕ್ಷರು ಮನೋಹರ್ ಕುಟಿನ್ಜಾ, ಮೂಡುಬಿದಿರೆ ವಲಯದ ಪಾಲನಾ ಪರಿಷದ್ ಕಾರ್ಯದರ್ಶಿ ಎ. ರೊನಾಲ್ಡ್ ಸೆರಾವೊ, ಕಾರ್ಯದರ್ಶಿ ವಿಲ್ಸನ್ ಪಿಂಟೊ, ಮೂಡುಬಿದಿರೆ ವಲಯ ಚರ್ಚ್ ಧರ್ಮಗುರುಗಳು, ಕಥೋಲಿಕ್ ಸಭಾ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.
0 Comments