ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಆಶ್ರಯದಲ್ಲಿ ಮಾ. 2 ರಿಂದ 6 ರವರೆಗೆ 67 ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಫ್ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದ 29 ರಾಜ್ಯಗಳಿಂದ ಹಾಗೂ ಸಾರ್ವಜನಿಕ ವಲಯಗಳಿಂದ ಒಟ್ಟು 700 ಮಂದಿ ಕ್ರೀಡಾಪಟುಗಳು ಹಾಗೂ 500 ಮಂದಿ ಕ್ರೀಡಾಧಿಕಾರಿಗಳು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ತಂಡಗಳಲ್ಲದೆ ಭಾರತೀಯ ರೈಲ್ವೇಸ್, ಮೇಜರ್ಪೋರ್ಟ್ಸ್, ಕೆನರಾ ಬ್ಯಾಂಕ್, ಇಸ್ರೋ, ಡಿ.ಎ.ಇ. ತಂಡಗಳು ಭಾಗವಹಿಸಲಿದ್ದು, ಇದು ರಾಷ್ಟ್ರೀಯದ ಅತ್ಯುನ್ನತ ಸ್ಪರ್ಧಾಕೂಟವಾಗಿರುತ್ತದೆ. ಪಂದ್ಯಾಟಗಳು ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ನಡೆಯಲಿದ್ದು 8 ಆವೆ ಮಣ್ಣಿನ ಅಂಗಣಗಳು ಸಜ್ಜುಗೊಂಡಿದೆ. ರಾಷ್ಟ್ರೀಯದ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಸ್ ಸಹಿತ ಪ್ರಮುಖ ಪಂದ್ಯಗಳನ್ನು ಒಳಾಂಗಣ ಹೊನಲು ಬೆಳಕಿನ ಕೃತಕ ಹುಲ್ಲು ಹಾಸಿನ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ವೀಕ್ಷಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಸ್ಕೋರಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಪಂದ್ಯಾವಳಿಯನ್ನು ನೇರ ಪ್ರಸಾರ ಮಾಡಲು ದೇಶದ ಹೆಸರಾಂತ ESI ಕ್ರೀಡಾ ನೆಟ್ವರ್ಕ್ ಮಾಧ್ಯಮ ಮುಂದಾಗಿದ್ದು, ಪಂದ್ಯಾವಳಿಗಳನ್ನು ನೇರ ಪ್ರಸಾರದ ಮೂಲಕ ದೇಶದೆಲ್ಲೆಡೆ ವೀಕ್ಷಿಸಬಹುದು. ಕರ್ನಾಟಕ ರಾಜ್ಯ ಪ್ರತಿನಿಧಿಸುವ ೧೦ ಜನರ ತಂಡದಲ್ಲಿ ಮಹಿಳಾ ಹಾಗೂ ಪುರುಷರ ಎರಡೂ ತಂಡಗಳಲ್ಲಿ ತಲಾ 7 ಜನ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಮಾರ್ಚ್ 2 ರಂದು ಸಂಜೆ 4.30 ಕ್ಕೆ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಚಾಂಪಿಯನ್ಶಿಪ್ನ್ನು ಶಾಸಕರಾದ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಗಳು ಮಾರ್ಚ್ 3 ರಂದು ಮುಂಜಾನೆ ಆರಂಭವಾಗಲಿದ್ದು ಮಾರ್ಚ್ 6 ರ ಸಂಜೆ 6.30 ರ ನಂತರ ಆಳ್ವಾಸ್ ಪುತ್ತಿಗೆ ಕ್ಯಾಂಪಸ್ನ ಒಳಾಂಗಣ ಕ್ರೀಡಾಂಗಣದಲ್ಲಿ ಫೈನಲ್ಸ್ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
0 Comments