ಮೂಡುಬಿದಿರೆ: ಲೇಖಕನ ಕಥಾ ವಸ್ತುವೇ ಕಥೆಯನ್ನು ತನ್ನ ಶೈಲಿಯನ್ನು ರೂಪಿಸಿಕೊಳ್ಳುತ್ತಾದೆ. ಲೇಖಕ ಒಬ್ಬ ಸಾಧನ ಅಷ್ಟೇ, ಲೇಖಕ ಕಥೆಯನ್ನು ಹುಡುಕುವುದಲ್ಲ ಬದಲಿಗೆ ಕಥೆಯೇ ತನ್ನಷ್ಟಕ್ಕೆ ಸೃಷ್ಟಿಗೊಳ್ಳುತ್ತಾದೆ. ಓದುಗನಿಗೆ ಓದಬೇಕೆಂಬ ಧಾವಂತ ಇರುವುದು ನಿಜ ಅದನ್ನು ಸರಿಯಾದ ರೀತಿಯಲ್ಲಿ ಓದಬೇಕೆಂದು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ತಿಳಿಸಿದರು.
ಅವರು ಗುರುವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಏರ್ಪಾಡಿಸಲಾಗಿದ್ದ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂರು ಕೃತಿಗಳ ಮನನ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಕಾರ್ಯಕ್ರಮದ ಕೇಂದ್ರ ಬಿಂದುವಾದ ಮಂಗಳೂರು ವಿವಿ ಸಹಾಯಕ ಪ್ರಧ್ಯಾಪಕ ಡಾ. ಧನಂಜಯ ಕುಂಬ್ಲೆ ಅವರು ಗೋಪಾಲಕೃಷ್ಣ ಪೈ ಅವರ 'ಸ್ವಪ್ನ ಸಾರಸ್ವತ', ರಂಗನಿರ್ದೇಶಕ ಡಾ.ದಿನಕರ ಎಸ್.ಪಚ್ಚನಾಡಿ ಕುಂ. ವೀರಭದ್ರಪ್ಪ ಅವರ 'ಅರಮನೆ' ಹಾಗೂ ಕತೆಗಾರ್ತಿ ಸ್ನೇಹಲತಾ ದಿವಾಕರ್ ರಾಘವೇಂದ್ರ ಪಾಟೀಲ ಅವರ 'ತೇರು' ಎಂಬ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಧನಂಜಯ ಕುಂಬ್ಳೆ ಮತ್ತು ಮೂಡುಬಿದಿರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ವೇಣುಗೋಪಾಲ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕನ್ನಡ ಪುಸ್ತಕ ಆಡಳಿತಾಧಿಕಾರಿ ಕಿರಣ್ ಸಿಂಗ್, ಸದಸ್ಯ ಸಂಚಾಲಕ ಟಿ.ಎನ್.ಖಂಡಿಗೆ, ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.
0 Comments