ವೈದ್ಯಕೀಯ ವಿದ್ಯಾರ್ಥಿಗಳಿಗೆ ಶವದೇಹವೇ ಮೊದಲ ಗುರು ಮತ್ತು ರೋಗಿ: ಡಾ. ಮೇಘನಾ ಮುಕುಂದ್

ವೈದ್ಯಕೀಯ ವಿದ್ಯಾರ್ಥಿಗಳಿಗೆ ಶವದೇಹವೇ ಮೊದಲ ಗುರು ಮತ್ತು  ರೋಗಿ: ಡಾ. ಮೇಘನಾ ಮುಕುಂದ್

ಮೂಡುಬಿದಿರೆ: ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಶವದೇಹ ಗೌರವ ಪ್ರತಿಜ್ಞಾ ಸಮಾರಂಭವು ಗುರುವಾರ ಮಿಜಾರು ಕ್ಯಾಂಪಸ್‌ನಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದ ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಸಿಮ್ಯುಲೇಶನ್ ಪ್ರಯೋಗಾಲಯದ ಸಂಯೋಜಕಿ ಡಾ. ಮೇಘನಾ ಮುಕುಂದ್ ಅವರು “ವೈದ್ಯಕೀಯ ವಿದ್ಯಾರ್ಥಿಗಳಿಗೆ ಶವದೇಹವೇ ಮೊದಲ ಗುರು. ಅದನ್ನು ಅತ್ಯಂತ ಗೌರವ ಮತ್ತು ಕೃತಜ್ಞತೆಯಿಂದ ಕಾಣುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಮಾನವ ದೇಹದ ಅಂಗರಚನೆಯನ್ನು ಅರಿತುಕೊಳ್ಳಲು ಹಾಗೂ ವೈದ್ಯಕೀಯ ಜ್ಞಾನದ ಮೂಲಭೂತ ಅಂಶಗಳನ್ನು ಕಲಿಯಲು ಶವದೇಹಗಳ ಕೊಡುಗೆ ಅಪಾರ. ಈ ಅಪರೂಪದ ಕಲಿಕಾ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಮಹಾಬಲ ಶೆಟ್ಟಿ ಮಾತನಾಡಿ, “ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ದಾನ ಮಾಡುವುದು ಸಾಮಾನ್ಯ ನಿರ್ಧಾರವಲ್ಲ. ಅದಕ್ಕೆ ಅಪಾರ ಉದಾರತೆ, ಮಾನವೀಯ ಕಾಳಜಿ ಹಾಗೂ ಸಮಾಜಸೇವೆಯ ಮನೋಭಾವ ಅಗತ್ಯ. ಮಾನವಕುಲದ ಒಳಿತಿಗಾಗಿ ವ್ಯಕ್ತಿಯೊಬ್ಬರು ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಗಳಲ್ಲಿ ದೇಹದಾನವೂ ಒಂದು ಎಂದರು.

ಈ ಸಂದರ್ಭದಲ್ಲಿ ಶವದೇಹಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಹಾಗೂ ಕೃತಜ್ಞತೆ ಅರ್ಪಿಸಲಾಯಿತು. 

ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಂಗೋಲಿ ಹಾಗೂ ಚಾರ್ಟ್ ತಯಾರಿಕಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾ. ವಿನಯ್ ಆಳ್ವ, ಡಾ. ಹನಾ ಶೆಟ್ಟಿ, ಡಾ. ಗ್ರೀಷ್ಮಾ ವಿವೇಕ್ ಆಳ್ವ, ಜನರಲ್ ಮೆಡಿಸಿನ್ ವಿಭಾಗದ ಡಾ. ಸದಾನಂದ ನಾಯಕ್ ಹಾಗೂ ಮಕ್ಕಳ ವಿಭಾಗದ ಡಾ. ವಸಂತ್ ಉಪಸ್ಥಿತರಿದ್ದರು. 

ಡಾ ಸಂಜನಾ ಎಮ್ ಕೆ ಕಾರ್ಯಕ್ರಮ ನಿರೂಪಿಸಿ, ಡಾ ಅಡ್ವoಟಿನಾ ರೋಡ್ರಿಗಸ್ ಸ್ವಾಗತಿಸಿ, ಡಾ ಬಾಲಕೃಷ್ಣ ವೈ ಸಿ ವಂದಿಸಿದರು.

Post a Comment

0 Comments

Advertisement