ಮೂಡುಬಿದಿರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಭಿಮಾನ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕನ್ನಡ ಲಿಪಿಯನ್ನು ಬರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಟಿ.ಎ.ಎನ್ ಖಂಡಿಗೆ ಅವರು ಭಾಗವಹಿಸಿ ಮಾತನಾಡಿ ಭಕ್ತಿ ಹಾಗೂ ಜೀವನಮೌಲ್ಯಗಳ ಮಹತ್ವವನ್ನು ತಿಳಿಸುತ್ತಾ, “ಸತಿಪತಿಗಳಿಂದ ಒಂದಾದ ಭಕ್ತಿ ಹಿತವಪ್ಪುದು ವಿದ್ಯಾರ್ಥಿಗಳಿಗೆ” ಎಂಬ ನುಡಿಯನ್ನು ಉಲ್ಲೇಖಿಸಿ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರೀತಿಯನ್ನು ಅಭಿನಂದಿಸಿದರು.
ಕರ್ನಾಟಕದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದ ಅವರು, 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣಗೊಂಡ ಮಹತ್ವದ ಘಟನೆಯನ್ನು ಸ್ಮರಿಸಿದರು. ಕರ್ನಾಟಕ ನಡೆದು ಬಂದ ಚಾರಿತ್ರಿಕ ಹಾದಿ, ನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಖ್ಯಾತ ಸಾಹಿತಿ ಹಾ.ಮಾ. ನಾಯಕ ಅವರ ನುಡಿಗಳನ್ನು ಉಲ್ಲೇಖಿಸುತ್ತಾ, “ಕನ್ನಡವು ಕನ್ನಡವನ್ನು ಕನ್ನಡಿಸುವಂತಿರಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕನ್ನಡ ಭಾಷೆಯ ಸ್ವಂತಿಕೆ, ಸೊಗಡು ಮತ್ತು ವೈಶಿಷ್ಟ್ಯವನ್ನು ಉಳಿಸಿಕೊಂಡು ಬಳಸಬೇಕು ಎಂದು ತಿಳಿಸಿದರು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿ, ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಅದರ ಉಳಿವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಸಂಸ್ಥೆಯ ಆಡಳಿತ ನಿರ್ದೇಶಕರಾದ ಬಿ.ಪಿ. ಸಂಪತ್ ಕುಮಾರ್,
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಟಿ.ಎ.ಎನ್ ಖಂಡಿಗೆ ಅವರನ್ನು,
ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಾದಿರಾಜ ಕಲ್ಲೂರಾಯ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶಿವಪ್ರಸಾದ್ ಭಟ್ ಹಾಗೂ ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್ , ಉಪಸ್ಥಿತರಿದ್ದರು .
ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರು ತೇಜಸ್ವಿ ಭಟ್ ಸ್ವಾಗತಿಸಿದರು.
ಪದವಿಪೂರ್ವ ವಿಭಾಗದ ವಿದ್ಯಾರ್ಥಿ ಆದಿಶ್ ಅವರು ಸುಮಧುರ ಗೀತೆಯನ್ನು ಹಾಡಿ ಸಭಿಕರನ್ನು ರಂಜಿಸಿದರು. ಪ್ರೌಢಶಾಲೆಯ ವಿದ್ಯಾರ್ಥಿನಿ ಗಾನಶ್ರೀ ಅವರು ಕನ್ನಡದ ಹಿರಿಮೆ ಹಾಗೂ ಭಾಷೆಯ ಮಹತ್ವವನ್ನು ಸಾರುವ ಕಿರುಭಾಷಣವನ್ನು ಪ್ರಸ್ತುತಪಡಿಸಿದರು.
ವಿದ್ಯಾರ್ಥಿನಿ ಆದ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

0 Comments