ಮೂಡುಬಿದಿರೆ: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ (ಕುಪ್ಮಾ) ವತಿಯಿಂದ ನೀಡಲಾಗುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಳ್ವಾಸ್ನ ಅನಿಲ್ ಮಸ್ಕರೇನ್ಹಾಸ್ ಭಾಜನರಾಗಿದ್ದಾರೆ. ಬೆಳ್ತಂಗಡಿಯ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಿಲ್ ಮಸ್ಕರೇನ್ಹಾಸ್ರವರೊಂದಿಗೆ ಜಿಲ್ಲೆಯ ಇತರ ಐವರು ಶಿಕ್ಷಕರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಆಳ್ವಾಸ್ ಸೆಂಟ್ರಲ್ ಸ್ಕೂಲ್ನ (ಪಿಯು ವಿಭಾಗ) ಸಿಬಿಎಸ್ಇ ವಿಭಾಗದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅನಿಲ್ ಮಸ್ಕರೇನ್ಹಾಸ್, ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ರೇಡಿಯೇಷನ್ ಫಿಸಿಕ್ಸ್ನಲ್ಲಿ ಅತ್ಯುತ್ತಮ ಸಾಧನೆಗಾಗಿ ಹೋಮಿ ಜೆ. ಭಾಭಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಗಮನಾರ್ಹ ಅನುಭವ ಹೊಂದಿದ್ದಾರೆ.
ಸಿಇಟಿ, ನೀಟ್, ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿಷಯದ ಕುರಿತ ಗಾಢವಾದ ಪರಿಕಲ್ಪನೆ, ಪರೀಕ್ಷಾ ಕೌಶಲ ಮತ್ತು ಆತ್ಮವಿಶ್ವಾಸ ಬೆಳೆಸುವ ಮೂಲಕ ಅವರ ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದ ಗುರಿ ಸಾಧನೆಗೆ ಪ್ರೇರಣೆ ನೀಡಿದ್ದಾರೆ. ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ಅವರು 1996–97ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡವನ್ನು ಪ್ರತಿನಿಧಿಸಿದ್ದರು.
ಇವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.

0 Comments