ಶಿವರಾಮ ಕಾರಂತ ಪ್ರಶಸ್ತಿ, ಮತ್ತು ಪುರಸ್ಕಾರ ಪ್ರದಾನ
ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ ೨೦೨೫ ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಶಿವರಾಮ ಕಾರಂತ ಪುರಸ್ಕಾರ ಪ್ರದಾನವು ಇಲ್ಲಿನ ಮಹಾವೀರ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.
ಡಾ. ತಾಳ್ತಜೆ ವಸಂತ ಕುಮಾರ್ ಕಾರ್‍ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಕಾರಂತರು ಸಾಹಿತ್ಯಕ್ಕೆ ಸೀಮಿತವಾಗದೆ ಯಕ್ಷಗಾನ, ಮಕ್ಕಳ ಸಾಹಿತ್ಯ, ಪರಿಸರ ಹೀಗೆ ಬಹುಮುಖ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕಿರುತೆರೆ ನಟ, ನಿರ್ದೇಶಕ ಟಿ ಎನ್ ಸೀತಾರಾಮ್, ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಡುಬಿದಿರೆ ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್ ಅವರಿಗೆ ತಲಾ ೨೦ ಸಾವಿರ ನಗದು, ಪ್ರಶಸ್ತಿ ಪತ್ರದೊಂದಿಗೆ ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಹಿರಿಯ ಸಾಹಿತಿಗಳಾದ ಡಾ. ಹಳೇಮನೆ ರಾಜಶೇಖರ, ಡಾ. ಕಾ. ವೆಂ ಶ್ರೀನಿವಾಸಮೂರ್ತಿ ಮತ್ತು ಡಾ. ಕೆ. ಎಸ್ ಚೈತ್ರಾ ಅವರಿಗೆ ತಲಾ ೧೦ ಸಾವಿರ ರೂ ನಗದು ಪ್ರಶಸ್ತಿ ಪತ್ರದೊಂದಿಗೆ ಶಿವರಾಮ ಕಾರಂತ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಟಿ. ಎನ್. ಸೀತಾರಾಮ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಶಿವರಾಮ ಕಾರಂತ ಕೇವಲ ಸಾಹಿತಿಯಾಗಿರದೆ ಸಮಾಜ ವಿಜ್ಞಾನಿ, ಮನೋವಿಜ್ಞಾನಿಯಾಗಿದ್ದರು. ಸಾಹಿತ್ಯ ಕ್ಷೇತ್ರದ ಸೆಲೆಬ್ರಿಟಿಯಾಗಿದ್ದರು. ಈಗಿನ ಯುವಜನತೆ ಸಾಹಿತ್ಯ, ಸಂಸ್ಕೃತಿಯಿಂದ ದೂರವುಳಿದು ರೀಲ್ಸ್‌ನಲ್ಲೇ ಮನರಂಜನೆ ಪಡೆಯುತ್ತಿದ್ದಾರೆ. ಪ್ರಾಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಕಾರಂತರ ಸಾಹಿತ್ಯ ಓದಲು ಪ್ರೇರೇಪಣೆ ನೀಡಬೇಕು ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಿವರಾಮ ಕಾರಂತ ಪ್ರಶಸ್ತಿ ಪೀಠದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.
ಸಮಿತಿಯ ಉಪಾಧ್ಯಕ್ಷ ಕೆ ಶ್ರೀಪತಿ ಭಟ್, ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ, ಕಾರ್‍ಯಕಾರಿ ಸಮಿತಿ ಸದಸ್ಯರಾದ ಡಾ. ಧನಂಜಯ ಕುಂಬ್ಳೆ, ವೇಣುಗೋಪಾಲ ಶೆಟ್ಟಿ, ಭಾನುಮತಿ ಶೀನಪ್ಪ, ರಾಜಾರಾಮ ಮೂಡುಬಿದಿರೆ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್‍ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ಕಾರ್‍ಯಕ್ರಮ ನಿರ್ವಹಿಸಿದರು.
----------------------
ಪ್ರಶಸ್ತಿ ಮೊತ್ತ ವಾಪಸ್ ನೀಡಿದ ಅಭಯಚಂದ್ರ :
ಸಮಾಜ ಮಂದಿರ ಸಭಾದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಅಧ್ಯಕ್ಷ ಅಭಯ ಚಂದ್ರ ಜೈನ್ ಅವರು ಪ್ರಶಸ್ತಿ ಮೊತ್ತ ೨೦ಸಾವಿರ ರೂಪಾಯಿಯನ್ನು ಸಮಿತಿಗೆ ವಾಪಸ್ ನೀಡಿದರು. ಹಾಗೂ ಸಮಿತಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ೨೦ ಸಾವಿರ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದರು.
----------------

0 Comments