ಪ್ರೇರಣಾ ಶಾಲೆಯಲ್ಲಿ ಶ್ರೀ ಶಾರದಾ ಪೂಜ

ಪ್ರೇರಣಾ ಶಾಲೆಯಲ್ಲಿ ಶ್ರೀ ಶಾರದಾ ಪೂಜ
  ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಶಾರದಾ ಪೂಜೆಯು ಜರುಗಿತು . ಶಾಲಾ ಶಿಕ್ಷಕ - ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳೇ ಪೂಜೆಯನ್ನು ನೆರವೇರಿಸಿದ್ದುದು ಗಮನಾರ್ಹ . ಮೂಡುಬಿದಿರೆಯ ಯುವ ಉದ್ಯಮಿ ಶ್ರೀ ಪುನೀತ್ ಕುಮಾರ್ ಕಟ್ಟೆಮಾರ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿದರು . 
" ಶಿಕ್ಷಣ ವ್ಯವಸ್ಥೆಯು  ವಾಣಿಜ್ಯೀಕರಣ ಗೊಂಡಿರುವ ಇಂದಿನ ಕಾಲದಲ್ಲಿ , ಪ್ರೇರಣಾ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸದೊಂದಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು ಸಂತಸದ ಸಂಗತಿ . ಇಂತಹ ಮೌಲ್ಯಯುತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಇಂದಿನ ಕಾಲದಲ್ಲಿ ಅವಶ್ಯಕವಾಗಿ ಬೇಕಾಗಿದೆ , ಆ ನಿಟ್ಟಿನಲ್ಲಿ ಪ್ರೇರಣಾ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ - ಶಿಕ್ಷಕಿಯರ ಬದ್ಧತೆ ಅನುಕರಣೀಯ " ಎಂದು ಪುನೀತ್ ಕುಮಾರ್ ಕಟ್ಟೆಮಾರ್ ರು ನುಡಿದರು . ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಮಾತಾಡಿದ ಶಾಲಾ ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು , " ಲಕ್ಷ್ಮೀದೇವಿಯು ಸಂಪತ್ತಿಗೆ ಅಧಿದೇವತೆಯಾದರೆ , ಪಾರ್ವತಿಯು ಶಕ್ತಿಯ ಅಧಿದೇವತೆ . ಶಾರದೆಯು ವಿದ್ಯೆಯ ಅಧಿದೇವತೆ .  ವಿದ್ಯೆ , ಬುದ್ದಿ , ಕಲೆ , ಜ್ಞಾನ , ಸಂಸ್ಕಾರವನ್ನು ಕರುಣಿಸುವ ದೇವರಾದ ಶಾರದಾ ಮಾತೆಯ ಪೂಜೆ ಮಾಡಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ ಆಗಿದೆ . ಆ ಕಾರಣದಿಂದಾಗಿ ಇಂದು ಪ್ರೇರಣಾ ಶಾಲೆಯಲ್ಲಿ  ಶಾರದಾ  ಮಾತೆಯ ಪೂಜೆಯನ್ನು ವಿದ್ಯಾರ್ಥಿಗಳೇ ಮಾಡುತ್ತಿರುವುದು ಸಕಾಲಿಕ , ಒಂದರ್ಥದಲ್ಲಿ ವಿದ್ಯಾಲಯ ಅಂದರೆ  ಶಾರದಾ ಮಾತೆಯ ಆಲಯ .  " ಎಂದು ನುಡಿದರು . 
    ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವತ್ಸಲಾ ರಾಜೇಶ್ ರವರು ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು . ವೈದಿಕರಾದ ಶ್ರೀ ಪ್ರಶಾಂತ್ ಭಟ್ ರವರ ಮಾರ್ಗದರ್ಶನದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವತ್ಸಲಾ ರಾಜೇಶ್  ಹಾಗೂ ಎಲ್ಲಾ ಶಿಕ್ಷಕ - ಶಿಕ್ಷಕಿಯರ  ಸಹಕಾರದಿಂದ ಶಾಲಾ ವಿದ್ಯಾರ್ಥಿ ಚಿನ್ಮಯ ಭಟ್ ಪೂಜಾ ವಿಧಿಯನ್ನು ನೆರವೇರಿಸಿದರು . ಎಲ್ಲಾ ವಿದ್ಯಾರ್ಥಿಗಳು ಮಂತ್ರ ಪಠನ ಮಾಡುತ್ತಾ  ತಮ್ಮ ತಮ್ಮ ಪುಸ್ತಕಗಳಿಗೆ ಪುಷ್ಪಾರ್ಚನೆ  ಮಾಡಿ " ಪುಸ್ತಕ ಪೂಜೆ " ಯನ್ನು ನೆರವೇರಿಸಿದರು .  ಶಾಲೆಯ ಎಲ್ಲಾ ಶಿಕ್ಷಕ - ಶಿಕ್ಷಕಿಯರು , ಅಡುಗೆ ಸಿಬ್ಬಂದಿ ಹಾಗೂ ವಾಹನ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು .

Post a Comment

0 Comments

Advertisement