ಶ್ರೀ ಮಹಾವೀರ ಕಾಲೇಜಿನಲ್ಲಿ ‘ಮಹಾವೀರ ಫೆಸ್ಟ್ 2K26’ ಉದ್ಘಾಟನೆ

ಶ್ರೀ ಮಹಾವೀರ ಕಾಲೇಜಿನಲ್ಲಿ ‘ಮಹಾವೀರ ಫೆಸ್ಟ್ 2K26’ ಉದ್ಘಾಟನೆ
ಮೂಡುಬಿದಿರೆ : ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ  ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಹಾಗೂ
ವಿಜ್ಞಾನ, ವಾಣಿಜ್ಯ, ಐಟಿ ಮತ್ತು ಮಾನವಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ
ಶುಕ್ರವಾರ ಆಯೋಜಿಸಲಾದ ಅಂತರಕಾಲೇಜು ಸ್ಪರ್ಧಾಕೂಟ ‘ಮಹಾವೀರ ಫೆಸ್ಟ್ 2K26’ ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ
ಹಾಗೂ ಮಂಗಳೂರಿನ ಸಿಂಚನಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ಶಾಖಾ ವ್ಯವಸ್ಥಾಪಕ ಸಂದೀಪ್ ಕುಮಾರ್ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ‘ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರ ಜೊತೆಗೆ ಅವರ ಜೀವನದ ಗುರಿಯನ್ನು ನಿರ್ಧರಿಸಲು ಮಾರ್ಗದರ್ಶನ
ನೀಡುತ್ತದೆ ಎಂದರು. 

ಶಿಕ್ಷಣವು ಜ್ಞಾನದ ಜೊತೆಗೆ ಶಿಸ್ತು ಮತ್ತು ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಪದವಿಪೂರ್ವ ಹಂತವು
ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸುವ ಪ್ರಮುಖ ಘಟ್ಟವಾಗಿದೆ. ಈ
ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ
ಪ್ರಯತ್ನಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನಗತ್ಯ ಮನರಂಜನೆಗೆ ಹೆಚ್ಚು ಸಮಯ ವ್ಯಯಿಸದೆ, ಶಿಕ್ಷಣಕ್ಕೆ ಆದ್ಯತೆ
ನೀಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

ಮಾಜಿ ಸಚಿವ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮಾತನಾಡಿ, ‘ಮಹಾವೀರ ಫೆಸ್ಟ್ 2K26’ ವಿದ್ಯಾರ್ಥಿಗಳ
ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಹಾಗೂ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮವಾಗಿದೆ
ಎಂದರು. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ
ಬದುಕಿನಲ್ಲಿ ಸಾಧನೆ ಮಾಡಿ ಉತ್ತಮ ಸ್ಥಾನಕ್ಕೇರಬೇಕು ಎಂದು ಹಾರೈಸಿದರು.

  ಕೊಕ್ರಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಯಾನಂದ
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ವೇದಿಕೆಯಲ್ಲಿ ಅಧ್ಯಾಪಕ ಸಂಯೋಜಕರಾದ ಡಾ. ಹರೀಶ್, ಗೀತಾ ರಾಮಕೃಷ್ಣ, ಶ್ರುತಿ ಎಸ್. ಡಾಂಗೆ, ನಿಕ್ಷಿತಾ ಮತ್ತು
ವಿದ್ಯಾರ್ಥಿ ನಾಯಕ ಕೀರ್ತನ್, ವಿದ್ಯಾರ್ಥಿ ಸಂಯೋಜಕರಾದ ವನಿತಾ, ಮರಿಯಮ್ಮ, ಶೋಧನ್ ಮತ್ತು ಪ್ರಜ್ವಲ್
ಉಪಸ್ಥಿತರಿದ್ದರು. 

ವಿದ್ಯಾರ್ಥಿನಿ ಸ್ವಪ್ನಾ ಸ್ವಾಗತಿಸಿದರು. ಮನೀಷಾ ಕಾರ್ಯಕ್ರಮವನ್ನು ನಿರೂಪಿಸಿದರು.  ಅಶ್ವಿನಿ
ವಂದಿಸಿದರು.
 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧಾಕೂಟದಲ್ಲಿ ಭಾಗವಹಿಸಿದರು.

Post a Comment

0 Comments

Advertisement