ಪಾಲಡ್ಕ ಗ್ರಾಮಸಭೆ
ಮೂಡುಬಿದಿರೆ: ತನ್ನ ವಿರುದ್ಧ ಲೋಕಾಯುಕ್ತದಲ್ಲಿ ಯಾವುದೇ ಪ್ರಕರಣವಿಲ್ಲ. ಆರೋಪವನ್ನು ಸಾಬೀತುಪಡಿಸುವಂತೆ ಪಂಚಾಯತ್ ನ ಮಾಜಿ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ಸವಾಲು ಹಾಕಿದ ಘಟನೆ ಪಾಲಡ್ಕ ಗ್ರಾಮಸಭೆಯಲ್ಲಿ ಬುಧವಾರ ನಡೆದಿದೆ.
ಪಾಲಡ್ಕ ಗ್ರಾಮ ಪಂಚಾಯತ್‌ನ 2026–27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಕಡಂದಲೆ ಪಲ್ಕೆ ಶ್ರೀ ಗಣೇಶ್ ದರ್ಶನದಲ್ಲಿ ನಡೆದಿದ್ದು ಈ ಸಂದಭ೯ದಲ್ಲಿ ಗ್ರಾಮಸ್ಥರಾದ ಹರೀಶ್ ಶೆಟ್ಟಿ ಮತ್ತು ಕೆ. ಪಿ. ಸುಚರಿತ ಶೆಟ್ಟಿ ಮಧ್ಯೆ‘ಲೋಕಾಯುಕ್ತ ಕೇಸ್’ ಆರೋಪದ ಕುರಿತು ಮಾತಿನ ಚಕಮಕಿ ನಡೆಯಿತು. ಹರೀಶ್ ಶೆಟ್ಟಿ ಮಾತನಾಡುತ್ತಿದ್ದ ವೇಳೆ ಸುನೀತಾ ಸುಚರಿತ ಶೆಟ್ಟಿ ಮಧ್ಯಪ್ರವೇಶಿಸಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲು ಗ್ರಾಮದಿಂದ ಬಂದವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್ ಶೆಟ್ಟಿ, ‘ಲೋಕಾಯುಕ್ತ ಕೇಸ್ ಆದವರು ಕೂಡ ವೇದಿಕೆಯಲ್ಲಿ ಕುಳಿತಿದ್ದಾರೆ’ ಎಂದು ಆರೋಪಿಸಿದಾಗ ತನ್ನ ಮೇಲೆ ಯಾವುದೇ ಲೋಕಾಯುಕ್ತ ಕೇಸಿಲ್ಲ ಇದ್ದರೆ ಅದನ್ನು ಸಾಬೀತು ಪಡಿಸಿ ಎಂದು ಸುಚರಿತ ಶೆಟ್ಟಿ ತಿಳಿಸಿದರು.
ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸರಕಾರಿ ಯೋಜನೆಗಳು ಹಾಗೂ ಗ್ರಾಮಸ್ಥರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಕಲ್ಲೋಳಿ ಪ್ರದೇಶದ ಹದಗೆಟ್ಟ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಸುನೀಲ್ ಮಡಿಕೆ ಮನವಿ ಮಾಡಿದರು. ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸುವಂತೆಯೂ ಅವರು ಒತ್ತಾಯಿಸಿದರು.
ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ 2016ರ ರಾಜ್ಯಪತ್ರದ ಆದೇಶ ಉಲ್ಲಂಘಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥ ಭಾಸ್ಕರ್ ಆರೋಪಿಸಿದರು. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದರೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದರು. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ಪಿಡಿಒ ಮಂಜುಳಾ ಹುನಗುಂದ ತಿಳಿಸಿದರು.
ಗ್ರಾಮಸ್ಥ ಸುಕೇಶ್ ಶೆಟ್ಟಿ ಮಾತನಾಡಿ, ಕೆಲವರು ಎನ್‌ಜಿಒಗಳ ಹೆಸರನ್ನು ಹೇಳಿಕೊಂಡು ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಹಿಂದಿನ ನಡವಳಿ, ಜಮಾ–ಖರ್ಚು, ವಾರ್ಡ್ ಸಭೆಗಳ ವರದಿ, ಕಾಮಗಾರಿಗಳು, ವಸತಿ–ನಿವೇಶನ ರಹಿತರ ಪಟ್ಟಿ, ‘ವಿಕಸಿತ ಭಾರತ’ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ ಹಾಗೂ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು. ಅರ್ಜಿಗಳನ್ನು ಸ್ವೀಕರಿಸಲಾಯಿತು.
ಲೆಕ್ಕ ಸಹಾಯಕಿ ಮೋಹಿನಿ ಕುಮಾರಿ, ನೋಡಲ್ ಅಧಿಕಾರಿ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ರಾಯಪ್ಪ ಈಳಿಗೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆ ಹಾಗೂ ಪಿಡಬ್ಲ್ಯುಡಿ ಸಭೆಗೆ ಗೈರಾಗಿದ್ದವು.

0 Comments